ಮೂಡುಬಿದಿರೆ: ವಿದ್ಯಾರ್ಥಿಗಳು ತಮ್ಮ ಸುವರ್ಣ ಭವಿಷ್ಯವನ್ನು ಸತ್ಪ್ರಜೆಗಳಾಗಿ ರೂಪಿಸಿಕೊಳ್ಳಬೇಕು. ಕ್ಷಣಿಕ ಕುತೂಹಲ ಅಥವಾ ಕೆಟ್ಟ ಸ್ನೇಹಿತರ ಪ್ರಭಾವಕ್ಕೆ ಒಳಗಾಗಿ ದುರಭ್ಯಾಸಗಳಿಗೆ ಬಲಿಯಾಗದೆ, ಜೀವನವನ್ನು ಸುಂದರವಾಗಿ ಕಟ್ಟಿಕೊಳ್ಳಬೇಕು ಎಂದು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ರಾಜೇಂದ್ರ ಬಿ. ಹೇಳಿದರು.

ಮೂಡುಬಿದಿರೆಯ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಮಾದಕ ವಸ್ತುಗಳ ದುಷ್ಪರಿಣಾಮದಿಂದ ದೂರವಿರಿಸಿ ಆರೋಗ್ಯವಂತ ಹಾಗೂ ಮೌಲ್ಯಾಧಾರಿತ ಬದುಕಿನತ್ತ ಮುನ್ನಡೆಸುವ ಉದ್ದೇಶದಿಂದ ಆಯೋಜಿಸಿದ್ದ 'ಡ್ರಗ್ ಅವೇರ್‌ನೆಸ್' (ಮಾದಕ ವಸ್ತು ಜಾಗೃತಿ) ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾದಕ ವಸ್ತುಗಳ ಸೇವನೆಯು ಒಬ್ಬ ವ್ಯಕ್ತಿಯ ಬದುಕಿಗೆ ಮಾತ್ರವಲ್ಲ, ಕುಟುಂಬದ ನೆಮ್ಮದಿ ಹಾಗೂ ಸಮಾಜದ ಶಾಂತಿಗೂ ಧಕ್ಕೆ ತರುವ ಗಂಭೀರ ಪಿಡುಗಾಗಿದೆ ಎಂದು ರಾಜೇಂದ್ರ ಬಿ. ಹೇಳಿದರು. ಕ್ಷಣಿಕ ಕುತೂಹಲ ಅಥವಾ ಕೆಟ್ಟ ಸ್ನೇಹಿತರ ಸಂಗದಿಂದ ಆರಂಭವಾಗುವ ಅಭ್ಯಾಸ ಇಡೀ ಜೀವನದ ದಿಕ್ಕನ್ನೇ ಬದಲಾಯಿಸಬಹುದು. ವಿದ್ಯಾರ್ಥಿಗಳು ಕಾನೂನಿನ ಅರಿವು, ಆತ್ಮಸಂಯಮ ಹಾಗೂ ಉತ್ತಮ ಜೀವನಮೌಲ್ಯಗಳನ್ನು ಮೈಗೂಡಿಸಿಕೊಂಡು ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಮುಲ್ಕಿ ಪೊಲೀಸ್ ಉಪನಿರೀಕ್ಷಕ ರಾಘವೇಂದ್ರ ನಾಯಕ್, ಯುವಜನರನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳ ಜಾಲ ವಿಸ್ತರಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಎಚ್ಚರಿಕೆಯ ಮನೋಭಾವ ಬೆಳೆಸಿಕೊಂಡು ಸಂಶಯಾಸ್ಪದ ಚಟುವಟಿಕೆಗಳ ಕುರಿತು ನಿರ್ಭಯವಾಗಿ ಮಾಹಿತಿ ನೀಡುವ ಜವಾಬ್ದಾರಿಯುತ ನಾಗರಿಕನಾಗಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಜೀವ ದೇವರ ಕೊಡುಗೆಯಾದರೆ ಜೀವನ ನಮ್ಮ ಸಾಧನೆ. ಜೀವವನ್ನು ಕಾಪಾಡಿ, ಜೀವನವನ್ನು ಸಾರ್ಥಕಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು. ಶಿಕ್ಷಣದ ನಿಜವಾದ ಉದ್ದೇಶ ಕೇವಲ ಶೈಕ್ಷಣಿಕ ಸಾಧನೆಯಲ್ಲ; ಉತ್ತಮ ವ್ಯಕ್ತಿತ್ವ, ಸಾಮಾಜಿಕ ಬದ್ಧತೆ ಹಾಗೂ ರಾಷ್ಟ್ರಪ್ರಜ್ಞೆಯುಳ್ಳ ಯುವಜನರನ್ನು ರೂಪಿಸುವುದಾಗಿದೆ ಎಂದು ಹೇಳಿದರು. ಜ್ಞಾನ, ಸಂಸ್ಕಾರ ಮತ್ತು ಶಿಸ್ತಿನ ಸಮನ್ವಯವೇ ವಿದ್ಯಾರ್ಥಿಯ ಬದುಕಿನ ಯಶಸ್ಸಿನ ನಿಜವಾದ ಮಾನದಂಡ ಎಂದು ಅಭಿಪ್ರಾಯಪಟ್ಟರು.

ರಶ್ಮಿತಾ ಜೈನ್, ವಿವೇಕ್ ಭಂಡಾರಿ ಹಾಗೂ ಪ್ರಾಂಶುಪಾಲ ಪುಷ್ಪರಾಜ್ ಉಪಸ್ಥಿತರಿದ್ದರು. ಮಂಜುಶ್ರೀ ನಾಯ್ಕ್ ಕಾರ್ಯಕ್ರಮ ನಿರೂಪಿಸಿ, ಪ್ರಿಯಾಂಕ ವಂದಿಸಿದರು.

ಮೂಡುಬಿದಿರೆಯ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ 'ಡ್ರಗ್ ಅವೇರ್‌ನೆಸ್' ಕಾರ್ಯಕ್ರಮದಲ್ಲಿ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ರಾಜೇಂದ್ರ ಬಿ. ಅವರನ್ನು ಗೌರವಿಸಲಾಯಿತು. ಯುವರಾಜ್ ಜೈನ್, ರಶ್ಮಿತಾ ಜೈನ್, ರಾಘವೇಂದ್ರ ನಾಯಕ್, ಪುಷ್ಪರಾಜ್ ಹಾಗೂ ವಿವೇಕ್ ಭಂಡಾರಿ ಉಪಸ್ಥಿತರಿದ್ದರು.