ಮೂಡುಬಿದಿರೆ: ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಡ್ಡೋಡಿ ಗ್ರಾಮದಲ್ಲಿ ಪ್ರಸ್ತಾವಿತ ಕೋಳಿ ಫಾರಂ ಕುರಿತು ಸ್ಥಳ ಪರಿವೀಕ್ಷಣೆ ನಡೆಸಿ, ಪರಿಸರ ಸಂರಕ್ಷಣಾ ಕ್ರಮಗಳು ಹಾಗೂ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಯ ಕುರಿತು ಮಾಹಿತಿ ಪಡೆದು ಮುಂದಿನ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಂಗಳೂರು ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿಗಳು ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿಯ ಪಿಡಿಒಗೆ ಸೂಚನೆ ನೀಡಿದ್ದಾರೆ.

ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವುದರೊಂದಿಗೆ ದೂರುದಾರರಿಗೆ ಹಿಂಬರಹ ನೀಡುವಂತೆಯೂ ನಿರ್ದೇಶಿಸಲಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಗೈಡ್ಲೈನ್ಸ್ ಪ್ರಕಾರ ಕೋಳಿ ಫಾರಂ ನಿವಾಸ ಪ್ರದೇಶ, ಜಲಮೂಲ, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಮತ್ತು ಗ್ರಾಮೀಣ ರಸ್ತೆಯಿಂದ ನಿಗದಿತ ಅಂತರ ಕಾಯ್ದುಕೊಳ್ಳಬೇಕು. ದುರ್ವಾಸನೆ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.