ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಮಲ್ಲಿಕಾ ಶೆಟ್ಟಿಯವರಿಗೆ ಶ್ರೀನಿವಾಸ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.

‘ಎಂಟನೇ ತರಗತಿಯ ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಷಯದ ಸಾಮರ್ಥ್ಯಗಳು, ಆಯ್ದ ಕನ್ನಡ ಭಾಷಾ ಸಾಮರ್ಥ್ಯಗಳು, ವೈಜ್ಞಾನಿಕ ತಾರ್ಕಿಕ ಚಿಂತನಾ ಸಾಮರ್ಥ್ಯ ಹಾಗೂ ವಿಜ್ಞಾನ ವಿಷಯದ ಶೈಕ್ಷಣಿಕ ಸಾಧನೆಯನ್ನು ಅಭಿವೃದ್ಧಿಪಡಿಸುವಲ್ಲಿ ಅಂತರಶಿಸ್ತೀಯ ಬಹುಮಾಧ್ಯಮ ಬೋಧನಾ ವಿಧಾನವು ಬೀರುವ ಪರಿಣಾಮಕಾರಿತ್ವದ ಅಧ್ಯಯನ’ ವಿಷಯದ ಸಂಶೋಧನಾ ಪ್ರಬಂಧಕ್ಕಾಗಿ ಅವರಿಗೆ ಈ ಪದವಿ ಲಭಿಸಿದೆ.

ಅಲೋಶಿಯಸ್ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ವಿಜಯಲಕ್ಷ್ಮಿ ನಾಯಕ್ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧವನ್ನು ಪೂರ್ಣಗೊಳಿಸಿದ್ದಾರೆ.

ಮಲ್ಲಿಕಾ ಶೆಟ್ಟಿ ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಬಿ.ಎಡ್. ಶಿಕ್ಷಣವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಗಳಲ್ಲಿ ಪೂರ್ಣಗೊಳಿಸಿದ್ದಾರೆ.

ಮೂಡುಬಿದಿರೆ ತಾಲೂಕಿನ ಪುಚ್ಚೆಮೊಗರು ಗ್ರಾಮದ ದಿವಂಗತ ಬೋಜ ಶೆಟ್ಟಿ ಹಾಗೂ ಸುಲೋಚನ ಶೆಟ್ಟಿ ದಂಪತಿಯ ಪುತ್ರಿಯಾಗಿರುವ ಮಲ್ಲಿಕಾ ಶೆಟ್ಟಿ, ಅನಿವಾಸಿ ಉದ್ಯೋಗಿ ರಾಜೇಶ್ ಶೆಟ್ಟಿಯವರ ಪತ್ನಿಯಾಗಿದ್ದಾರೆ.