ಮೂಡುಬಿದಿರೆ: 201 ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ದಾಖಲಾಗಿರುವ 15,702 ಎಎಸ್‌ಡಿಡಿಒ ಪ್ರಕರಣಗಳ ಮರುಪರಿಶೀಲನೆಗಾಗಿ ರಾಜಕೀಯ ಪಕ್ಷಗಳ ಬೂತ್ ಏಜೆಂಟರಿಗೆ ಪಟ್ಟಿಯನ್ನು ವಿತರಿಸಲಾಗಿದ್ದು, ಆಗಸ್ಟ್ 8ರೊಳಗೆ ಬಿಎಲ್‌ಒಗಳ ಮೂಲಕ ಪರಿಶೀಲಿಸಿ ಹಿಂತಿರುಗಿಸಲು ಅವಕಾಶ ನೀಡಲಾಗಿದೆ ಎಂದು ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಮೇಘನಾ ಆರ್ ತಿಳಿಸಿದರು.
ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ಕ್ಷೇತ್ರದಲ್ಲಿ 2,08,981 ಎಣಿಕೆ ನಮೂನೆಗಳನ್ನು ಸಂಗ್ರಹಿಸಲಾಗಿದ್ದು, ಶೇ.100ರಷ್ಟು ಸಂಗ್ರಹ ಪೂರ್ಣಗೊಂಡಿದೆ ಎಂದರು. ಅರ್ಹ ಮತದಾರರ ಹೆಸರನ್ನು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಕೈಬಿಡುವುದಿಲ್ಲ; ಅನರ್ಹರ ಹೆಸರನ್ನು ಮಾತ್ರ ಕೈಬಿಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಹಾಯಕ ಮತದಾರರ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಮಾತನಾಡಿ, ಆಗಸ್ಟ್ 8ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ ಎಂದರು. 1,93,370 ಎಣಿಕೆ ನಮೂನೆಗಳು ಡಿಜಿಟಲೀಕರಣಗೊಂಡಿದ್ದು, ಶೇ.92.53ರಷ್ಟು ಪ್ರಗತಿ ಸಾಧಿಸಲಾಗಿದೆ. ಉಳಿದ 15,702 ಎಎಸ್‌ಡಿಡಿಒ ಪ್ರಕರಣಗಳಲ್ಲಿ 1,262 ಗೈರು ಹಾಜರಾದವರು, 7,564 ಶಾಶ್ವತವಾಗಿ ಸ್ಥಳಾಂತರಗೊಂಡವರು, 4,967 ಮೃತರು ಹಾಗೂ ಸುಮಾರು 1,700 ದ್ವಿಪತ್ರಿ ಮತದಾರರ ಪ್ರಕರಣಗಳಿವೆ ಎಂದು ತಿಳಿಸಿದರು.