ಮೂಡುಬಿದಿರೆ: ವಿದ್ಯಾರ್ಥಿ ಜೀವನವೇ ವ್ಯಕ್ತಿತ್ವ ರೂಪುಗೊಳ್ಳುವ ಅತ್ಯಂತ ಮಹತ್ವದ ಹಂತವಾಗಿದ್ದು, ಈ ಅವಧಿಯಲ್ಲಿ ಬೆಳೆಸಿಕೊಳ್ಳುವ ಓದುವ ಹವ್ಯಾಸ, ಸೃಜನಶೀಲತೆ ಹಾಗೂ ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆ ಭವಿಷ್ಯದ ಯಶಸ್ವಿ ಬದುಕಿಗೆ ಭದ್ರ ಬುನಾದಿಯಾಗುತ್ತದೆ ಎಂದು ಖ್ಯಾತ ಸಂಶೋಧಕ ಡಾ. ತುಕಾರಾಮ ಪೂಜಾರಿ ಹೇಳಿದರು.

ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಲಾ ಸಂಘ, ಸಾಹಿತ್ಯ ಸಂಘ, ಮತದಾರರ ಸಾಕ್ಷರತಾ ಸಂಘ ಹಾಗೂ ರೋವರ್ಸ್-ರೇಂಜರ್ಸ್ ಘಟಕಗಳ ಈ ಶೈಕ್ಷಣಿಕ ವರ್ಷದ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಜ್ಞಾನದೊಂದಿಗೆ ಜೀವನ ಮೌಲ್ಯಗಳ ಅರಿವು ಸಹ ಅಷ್ಟೇ ಅಗತ್ಯ ಎಂದು ತಿಳಿಸಿದರು. ಓದುವ ಹವ್ಯಾಸವು ಜ್ಞಾನವನ್ನು ವಿಸ್ತರಿಸುವುದರ ಜೊತೆಗೆ ಕಲ್ಪನಾ ಶಕ್ತಿ ಮತ್ತು ಸೃಜನಶೀಲತೆಗೆ ಹೊಸ ದಿಕ್ಕು ನೀಡುತ್ತದೆ. ಬದುಕಿನಲ್ಲಿ ಕೇವಲ ಅಂಕಗಳಿಕೆಯೇ ಯಶಸ್ಸಿನ ಮಾನದಂಡವಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನಲ್ಲಿರುವ ಪ್ರತಿಭೆ, ಆಸಕ್ತಿ ಹಾಗೂ ಸೃಜನಶೀಲತೆಯನ್ನು ಗುರುತಿಸಿ ಬೆಳೆಸಿಕೊಳ್ಳುವ ಮೂಲಕ ಸಮಾಜಕ್ಕೆ ಉಪಯುಕ್ತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿ ಪಿ. ಎನ್. ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪಡೆಯುವ ಅನುಭವಗಳು ಜೀವನದ ಅಮೂಲ್ಯ ಸಂಪತ್ತಾಗಿದ್ದು, "ಅನುಭವ ಸಿಹಿ ಅಲ್ಲ, ಅದರ ನೆನಪೇ ಸಿಹಿ" ಎಂಬ ಮಾತು ಜೀವನದ ಸತ್ಯವನ್ನು ಪ್ರತಿಬಿಂಬಿಸುತ್ತದೆ ಎಂದರು. ಶಿಕ್ಷಣವು ಕೇವಲ ವೈಯಕ್ತಿಕ ಪ್ರಗತಿಗೆ ಸೀಮಿತವಾಗದೆ ಸಮಾಜದ ಒಳಿತಿಗೂ ದಾರಿಯಾಗಬೇಕು. ನಮಗಾಗಿ ಬದುಕಿದರೆ ಸಾಮಾನ್ಯ ವ್ಯಕ್ತಿಗಳಾಗುತ್ತೇವೆ; ಇತರರಿಗಾಗಿ ಬದುಕಿದರೆ ಅಸಾಮಾನ್ಯ ವ್ಯಕ್ತಿಗಳಾಗುತ್ತೇವೆ. ಕಾಲೇಜಿನ ವಿವಿಧ ಸಂಘಗಳು ವಿದ್ಯಾರ್ಥಿಗಳ ಪ್ರತಿಭೆ, ನಾಯಕತ್ವ, ಸಾಹಿತ್ಯಾಸಕ್ತಿ, ಕಲಾ ಕೌಶಲ್ಯ ಹಾಗೂ ಸಾಮಾಜಿಕ ಸೇವಾ ಮನೋಭಾವವನ್ನು ಬೆಳೆಸುವ ಉತ್ತಮ ವೇದಿಕೆಗಳಾಗಿದ್ದು, ಎಲ್ಲ ವಿದ್ಯಾರ್ಥಿಗಳು ಅವುಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ., ಕಲಾ ವಿಭಾಗದ ಡೀನ್ ವೇಣುಗೋಪಾಲ್ ಶೆಟ್ಟಿ, ವಿವಿಧ ಸಂಘಗಳ ಸಂಯೋಜಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಪ್ತಮಿ ಸ್ವಾಗತಿಸಿ, ಮಧು ಅತಿಥಿಯನ್ನು ಪರಿಚಯಿಸಿದರು. ಲಿಖಿತ ಕಾರ್ಯಕ್ರಮ ನಿರೂಪಿಸಿ, ಶ್ರವಣ್ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.