ಮೂಡುಬಿದಿರೆ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಬುದ್ಧಿಮತ್ತೆಯೊಂದಿಗೆ ದೃಢ ಸಂಕಲ್ಪ, ನಿರಂತರ ಪರಿಶ್ರಮ ಹಾಗೂ ಸರಿಯಾದ ಮಾರ್ಗದರ್ಶನ ಅಗತ್ಯ ಎಂದು ರಾಷ್ಟ್ರಮಟ್ಟದ ವೃತ್ತಿಮಾರ್ಗದರ್ಶನ ತಜ್ಞ ವಿವೇಕ್ ಭಂಡಾರಿ ಹೇಳಿದರು.
ಮೂಡುಬಿದಿರೆಯ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಸಾಮರ್ಥ್ಯ ಹಾಗೂ ಅಭಿರುಚಿಗೆ ಅನುಗುಣವಾಗಿ ವೃತ್ತಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಯೋಜಿತ ಅಧ್ಯಯನ ಮತ್ತು ಆತ್ಮವಿಶ್ವಾಸ ಯಶಸ್ಸಿನ ಮೆಟ್ಟಿಲುಗಳಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ, ಶಿಕ್ಷಣವು ಜ್ಞಾನ ನೀಡುವುದರೊಂದಿಗೆ ಮೌಲ್ಯಪ್ರಜ್ಞೆ ಹಾಗೂ ಸಾಮಾಜಿಕ ಬದ್ಧತೆಯನ್ನು ಬೆಳೆಸಬೇಕು ಎಂದರು. ಶಿಸ್ತು, ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಗುರಿ ಸಾಧಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್, ಸಿಬಿಎಸ್ಇ ಪ್ರಾಂಶುಪಾಲ ಶ್ರೀಪ್ರಸಾದ್, ಹಳೆಯ ವಿದ್ಯಾರ್ಥಿನಿ ಮೌಲ್ಯ ವೈ.ಆರ್. ಜೈನ್ ಹಾಗೂ ವಿಜೇತಾ ಉಪಸ್ಥಿತರಿದ್ದರು.
ಎಕ್ಸಲೆಂಟ್ ಪ್ರೌಢಶಾಲೆಯ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ನಡೆದ ಪ್ರತ್ಯೇಕ ಕಾರ್ಯಕ್ರಮದಲ್ಲಿ ವಿವೇಕ್ ಭಂಡಾರಿ ಯುಪಿಎಸ್‌ಸಿ, ಐಐಟಿ-ಜೆಇಇ, ನೀಟ್, ಸಿಎ ಹಾಗೂ ಕ್ಲ್ಯಾಟ್ ಕುರಿತು ಮಾಹಿತಿ ನೀಡಿದರು. ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವಿವಿಧ ಉನ್ನತ ಶಿಕ್ಷಣ ಕ್ಷೇತ್ರಗಳ ಅವಕಾಶಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಹಾಗೂ ವೃತ್ತಿ ಯೋಜನೆ ಕುರಿತು ಮಾಹಿತಿ ನೀಡಲಾಯಿತು.
ಮಂಜುಳಾ ನಾಯ್ಕ್ ನಿರೂಪಿಸಿದರು. ಪ್ರಿಯಾಂಕ ವಂದಿಸಿದರು.