ಮೂಡುಬಿದಿರೆ: ಆಳ್ವಾಸ್ ಪ್ರಗತಿ–2026ರ 16ನೇ ಆವೃತ್ತಿಯ ಬೃಹತ್ ಉದ್ಯೋಗ ಮೇಳದ ಮೊದಲ ದಿನವೇ 13,016 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿ ಉದ್ಯೋಗಾವಕಾಶಗಳತ್ತ ಹೆಜ್ಜೆ ಇಟ್ಟರು. ಮೇಳದಲ್ಲಿ 326 ಕಂಪನಿಗಳು ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, 13,247 ಮಂದಿ ಆನ್‌ಲೈನ್ ಹಾಗೂ 83 ಮಂದಿ ಸ್ಥಳದಲ್ಲೇ ನೋಂದಣಿ ಮಾಡಿಕೊಂಡಿದ್ದಾರೆ.
ಮೊದಲ ದಿನವೇ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಕಾಂ ಪದವೀಧರೆ ಹಾಗೂ ದೈಹಿಕ ವಿಶೇಷಚೇತನ ಅಭ್ಯರ್ಥಿ ಭಾಗ್ಯಶ್ರೀ ಕುಲಾಲ್ ಅವರು ಮೈಸೂರಿನ ರೆಡ್ಡೀಸ್ ಫೌಂಡೇಷನ್ ಸಂಸ್ಥೆಯಲ್ಲಿ ಅಕೌಂಟೆಂಟ್ ಹುದ್ದೆಗೆ ಆಯ್ಕೆಯಾಗುವ ಮೂಲಕ ಗಮನ ಸೆಳೆದರು. ಕಳೆದ ಒಂದು ವರ್ಷದಿಂದ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದ ಅವರು ತಮ್ಮ ಸಹೋದರನ ನೆರವಿನಿಂದ ಗಾಲಿಕುರ್ಚಿಯಲ್ಲಿ ಮೇಳಕ್ಕೆ ಆಗಮಿಸಿ ಸಂದರ್ಶನದಲ್ಲಿ ಯಶಸ್ವಿಯಾದರು.
ಮೇಳದಲ್ಲಿ ವೈದ್ಯಕೀಯ, ಅರೆ ವೈದ್ಯಕೀಯ, ಇಂಜಿನಿಯರಿಂಗ್, ಕಲಾ, ವಾಣಿಜ್ಯ, ಆಡಳಿತ ನಿರ್ವಹಣೆ, ಮೂಲ ವಿಜ್ಞಾನ, ನರ್ಸಿಂಗ್, ಐಟಿಐ, ಡಿಪ್ಲೊಮಾ, ಎಸ್‌ಎಸ್‌ಎಲ್‌ಸಿ, ಪಿಯುಸಿ ಸೇರಿದಂತೆ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವೀಧರರಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ.
ಎಐ ಚಾಟ್‌ಬಾಟ್ ವಿಶೇಷ ಆಕರ್ಷಣೆ
ಈ ಬಾರಿಯ ಮೇಳದಲ್ಲಿ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಚಾಟ್‌ಬಾಟ್ ಪರಿಚಯಿಸಲಾಗಿದೆ. ಅಭ್ಯರ್ಥಿಗಳು ತಮ್ಮ ರೆಸ್ಯೂಮ್, ವಿದ್ಯಾರ್ಹತೆ, ಅಂಕಗಳು ಹಾಗೂ ಸಿಜಿಪಿಎ ವಿವರಗಳನ್ನು ದಾಖಲಿಸಿದರೆ, ಅವರ ಅರ್ಹತೆಗೆ ಹೊಂದುವ ಐದು ಸೂಕ್ತ ಕಂಪನಿಗಳನ್ನು ಎಐ ಶಿಫಾರಸು ಮಾಡುತ್ತಿದೆ. ಇದಕ್ಕಾಗಿ ಮೇಳದ ವಿವಿಧ ಸ್ಥಳಗಳಲ್ಲಿ ಕ್ಯೂಆರ್ ಕೋಡ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಸಾವಿರಕ್ಕೂ ಅಧಿಕ ಸ್ವಯಂಸೇವಕರ ಸೇವೆ ಮೇಳದ ನಿರ್ವಹಣೆಗಾಗಿ ಔದ್ಯೋಗಿಕ ಉನ್ನತೀಕರಣ ಕೇಂದ್ರ ಸ್ಥಾಪಿಸಲಾಗಿದ್ದು, 120 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಎಂಟು ದಿನಗಳ ಕಾರ್ಪೊರೇಟ್ ತರಬೇತಿ ನೀಡಲಾಗಿದೆ. ಜೊತೆಗೆ 500 ಸಿಬ್ಬಂದಿ ಹಾಗೂ 1,000 ಸ್ವಯಂಸೇವಕರು ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಭ್ಯರ್ಥಿಗಳ ವಿದ್ಯಾರ್ಹತೆಗೆ ಅನುಗುಣವಾಗಿ 'ಸಪ್ತವರ್ಣ' ಕಲರ್ ಕೋಡಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಕಂಪನಿಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಗುರುತಿಸಲು ಅನುಕೂಲವಾಗಿದೆ. ಕಂಪನಿಯ ಹೆಸರು, ಹುದ್ದೆ, ಖಾಲಿ ಹುದ್ದೆಗಳು, ಅರ್ಹತೆ, ವೇತನ, ಅನುಭವ, ಉದ್ಯೋಗದ ಸ್ಥಳ ಹಾಗೂ ಸಂದರ್ಶನ ಕೊಠಡಿ ಸಂಖ್ಯೆಯ ಮಾಹಿತಿಯುಳ್ಳ ಕೈಪಿಡಿಯನ್ನೂ ಅಭ್ಯರ್ಥಿಗಳಿಗೆ ವಿತರಿಸಲಾಗಿದೆ. ತಂತ್ರಜ್ಞಾನ ಮತ್ತು ಸುರಕ್ಷತೆಗೆ ಆದ್ಯತೆ ಮೇಳದಲ್ಲಿ ಕೇಂದ್ರೀಕೃತ ನಿಯಂತ್ರಣ ಕೊಠಡಿ, ಸಿಸಿಟಿವಿ ಕ್ಯಾಮೆರಾಗಳು, 523ಕ್ಕೂ ಅಧಿಕ ಸಂದರ್ಶನ ಕೊಠಡಿಗಳು, ಬೃಹತ್ ಎಲ್‌ಇಡಿ ಪರದೆ ಹಾಗೂ 800ಕ್ಕೂ ಅಧಿಕ ಮಾನವ ಸಂಪನ್ಮೂಲ ಅಧಿಕಾರಿಗಳ ಮೂಲಕ ಸಂದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ. ಅವರ ವಸತಿ ಮತ್ತು ಪ್ರಯಾಣ ವ್ಯವಸ್ಥೆಯನ್ನೂ ಮಾಡಲಾಗಿದೆ.
ಹೊರ ಜಿಲ್ಲೆಗಳ ಅಭ್ಯರ್ಥಿಗಳಿಗೆ ಉಚಿತ ವಸತಿ
ಮಳೆಗಾಲವನ್ನು ಗಮನದಲ್ಲಿಟ್ಟುಕೊಂಡು ಪ್ರಮುಖ ಸಂಚಾರ ಮಾರ್ಗಗಳು, ನೋಂದಣಿ ಕೇಂದ್ರಗಳು ಹಾಗೂ ಸಂದರ್ಶನ ಕಟ್ಟಡಗಳ ಪ್ರವೇಶ ದ್ವಾರಗಳಲ್ಲಿ ಶೀಟ್ ಅಳವಡಿಸಲಾಗಿದೆ. ಹೊರ ಜಿಲ್ಲೆಗಳಿಂದ ಆಗಮಿಸುವ ಅಭ್ಯರ್ಥಿಗಳಿಗಾಗಿ 1,500 ಕೊಠಡಿಗಳ ಉಚಿತ ವಸತಿ ವ್ಯವಸ್ಥೆ ಮಾಡಲಾಗಿದ್ದು, ಬೈಂದೂರು, ಬ್ರಹ್ಮಾವರ, ಪುತ್ತೂರು, ಬೆಳ್ತಂಗಡಿ ಹಾಗೂ ಉಡುಪಿಯಿಂದ ಬಸ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಮೇಳದಲ್ಲಿ ಅಧಿಕೃತ ಸಹಭಾಗಿಗಳಾಗಿರುವ 30ಕ್ಕೂ ಅಧಿಕ ಯುವ ನಾಯಕರು ಅಭ್ಯರ್ಥಿಗಳಿಗೆ ಮಾರ್ಗದರ್ಶನ, ನೋಂದಣಿ ಹಾಗೂ ಮಾಹಿತಿ ಸೇವೆ ಒದಗಿಸುತ್ತಿದ್ದಾರೆ.