ಮೂಡುಬಿದಿರೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ಸಚಿವ ಸ್ಥಾನ ಸಿಗದಿರುವುದಕ್ಕೆ ಒತ್ತಡ ಹೇರುವುದು ಅಥವಾ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದ್ದಾರೆ.

ಈಗಾಗಲೇ ಸಚಿವ ಸ್ಥಾನ ನಿರ್ವಹಿಸಿರುವ ಹಿರಿಯ ಶಾಸಕರು ತಮ್ಮ ಅನುಭವದೊಂದಿಗೆ ಯುವ ಶಾಸಕರಿಗೆ ಅವಕಾಶ ಕಲ್ಪಿಸಬೇಕು. ಹಿರಿಯರು ಯುವ ತಲೆಮಾರಿಗೆ ಮಾದರಿಯಾಗಬೇಕು. ಸಚಿವ ಸ್ಥಾನದಿಂದ ವಂಚಿತರಾದವರಿಗೆ ಅವಕಾಶ ದೊರೆಯುವಂತೆ ಸಹಕರಿಸುವುದು ಹಿರಿಯ ಶಾಸಕರ ಜವಾಬ್ದಾರಿಯಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾವು ಈ ಹಿಂದೆ ಮೀನುಗಾರಿಕಾ ಸಚಿವರಾಗಿ ಕಾರ್ಯನಿರ್ವಹಿಸಿದ್ದು, ಸಚಿವ ಸ್ಥಾನವನ್ನು ಬಿಟ್ಟುಕೊಡುವ ಸಂದರ್ಭ ಬಂದಾಗ ಯಾವುದೇ ಅಸಮಾಧಾನವಿಲ್ಲದೆ ಸಂತೋಷದಿಂದಲೇ ಸ್ಥಾನ ತ್ಯಜಿಸಿದ್ದಾಗಿ ಅಭಯಚಂದ್ರ ಜೈನ್ ತಿಳಿಸಿದ್ದಾರೆ.

ಪಕ್ಷದಲ್ಲಿ ಹಿರಿಯರು ಹಾಗೂ ಯುವಕರ ನಡುವೆ ಅವಕಾಶ ಹಂಚಿಕೆಯಾಗುವ ಮೂಲಕ ಹೊಸ ತಲೆಮಾರಿಗೆ ರಾಜಕೀಯವಾಗಿ ಮುನ್ನಡೆಯಲು ಅವಕಾಶ ಸಿಗಬೇಕು. ಸಚಿವ ಸ್ಥಾನಕ್ಕಾಗಿ ಒತ್ತಡ ಅಥವಾ ಪ್ರತಿಭಟನೆ ನಡೆಸುವ ಬದಲು ಪಕ್ಷದ ಹಿತದೃಷ್ಟಿಯಿಂದ ಅವಕಾಶ ಕಲ್ಪಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.