ಮೂಡುಬಿದಿರೆ: ಜಾನಪದವು ನಮ್ಮ ಸಂಸ್ಕೃತಿಯ ಜೀವಾಳವಾಗಿದ್ದು, ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಜಾನಪದ ಪರಂಪರೆಯ ಅರಿವು ಹೊಂದುವುದು ಅಗತ್ಯ ಎಂದು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಹೇಳಿದರು.

ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಘಟಕ, ಮೂಡುಬಿದಿರೆ ತಾಲೂಕು ಘಟಕ ಹಾಗೂ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಜಾನಪದ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಸಪ್ರಶ್ನೆಯಂತಹ ಕಾರ್ಯಕ್ರಮಗಳು ಸಾಮಾನ್ಯ ಜ್ಞಾನ, ಚಿಂತನಶಕ್ತಿ, ಆತ್ಮವಿಶ್ವಾಸ ಹಾಗೂ ಸ್ಪರ್ಧಾತ್ಮಕ ಮನೋಭಾವ ಬೆಳೆಸುತ್ತವೆ ಎಂದರು.

ಕರ್ನಾಟಕ ಜಾನಪದ ಪರಿಷತ್ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷೆ ಪದ್ಮಶ್ರೀ ಭಟ್ ನಿಡ್ಡೋಡಿ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ಮಂದಾರ ರಾಜೇಶ್ ಭಟ್, ಉದ್ಯಮಿ ಸದಾಶಿವ ರಾವ್, ಸಾಹಿತಿ ಸದಾನಂದ ನಾರವಿ, ಕರ್ನಾಟಕ ಜಾನಪದ ಪರಿಷತ್ ಮೂಡುಬಿದಿರೆ ತಾಲೂಕು ಘಟಕದ ಕಾರ್ಯದರ್ಶಿ ಮಲ್ಲಿಕಾ ಸುರೇಶ್, ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು. ಚೇತನಾ ರಾಜೇಂದ್ರ ಹೆಗ್ಡೆ ನಿರೂಪಿಸಿದರೆ, ಸತೀಶ್ ಅಬ್ಬನಡ್ಕ ವಂದಿಸಿದರು.