ಮೂಡುಬಿದಿರೆ: ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಹಿಂದೂ ಜಾಗರಣ ವೇದಿಕೆ ಮೂಡುಬಿದಿರೆ ತಾಲೂಕು, ಮಂಗಳೂರು ಜಿಲ್ಲೆ ವತಿಯಿಂದ ಭಾನುವಾರ ರಾತ್ರಿ ಬೃಹತ್ ಪಂಜಿನ ಮೆರವಣಿಗೆ ನಡೆಯಿತು. ಐತಿಹಾಸಿಕ ಸಾವಿರ ಕಂಬದ ಬಸದಿಯಿಂದ ಆರಂಭಗೊಂಡ ಮೆರವಣಿಗೆ ಸಮಾಜ ಮಂದಿರದವರೆಗೆ ಸಾಗಿತು. ಭಜನಾ ತಂಡಗಳು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಂದು ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡರು.
ಪೃಥ್ವಿಶ್ ಧರ್ಮಸ್ಥಳ ದಿಕ್ಸೂಚಿ ಭಾಷಣ ಮಾಡಿ , ಅಖಂಡ ಭಾರತ ಕೇವಲ ಭೌಗೋಳಿಕ ಕಲ್ಪನೆಯಲ್ಲ. ಭಾರತದ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ಬೆಸೆದುಕೊಂಡಿರುವ ಪ್ರದೇಶಗಳ ಕುರಿತು ಮುಂದಿನ ಪೀಳಿಗೆಗೆ ಅರಿವು ಮೂಡಿಸಬೇಕು ಎಂದರು. ರಾಮಮಂದಿರ ನಿರ್ಮಾಣ ಮತ್ತು ಸೋಮನಾಥ ದೇವಾಲಯದ ಪುನರ್‌ನಿರ್ಮಾಣದಂತಹ ಘಟನೆಗಳು ದೀರ್ಘಕಾಲದ ಸಂಕಲ್ಪ ಹಾಗೂ ನಿರಂತರ ಪ್ರಯತ್ನದ ಮಹತ್ವವನ್ನು ತೋರಿಸಿವೆ ಎಂದರು.
ಭಾರತ ವಿಭಜನೆ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿನ ಹಿಂದೂಗಳ ಜನಸಂಖ್ಯೆಯಲ್ಲಿನ ಬದಲಾವಣೆ ಹಾಗೂ ದೇಶದಲ್ಲಿನ ಜನಸಂಖ್ಯಾ ಬದಲಾವಣೆಗಳ ಕುರಿತು ಆತಂಕ ವ್ಯಕ್ತಪಡಿಸಿದ ಪೃಥ್ವಿಶ್ ಧರ್ಮಸ್ಥಳ, ಹಿಂದೂ ಸಮಾಜ ಸಂಘಟಿತವಾಗಿ ರಾಷ್ಟ್ರದ ಏಕತೆ, ಸಂವಿಧಾನ ಮತ್ತು ಗಣರಾಜ್ಯ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಕರೆ ನೀಡಿದರು. ಅಖಂಡ ಭಾರತದ ಕುರಿತು ಸಾಂಸ್ಕೃತಿಕ ಮತ್ತು ವೈಚಾರಿಕ ನೆಲೆಯಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಕೀಲ ಶರತ್ ಶೆಟ್ಟಿ ಮಾತನಾಡಿ, ಭಾರತದ ಐತಿಹಾಸಿಕ ಶ್ರೀಮಂತಿಕೆಗೆ ಮೂಡುಬಿದಿರೆಯ ಇತಿಹಾಸವೇ ಸಾಕ್ಷಿ ಎಂದರು. 1400ರ ವೇಳೆಯಲ್ಲೇ ಮೂಡುಬಿದಿರೆಯಲ್ಲಿ 18 ಬಸದಿಗಳು ನಿರ್ಮಾಣವಾಗಿದ್ದು, ನಗರ ಧಾರ್ಮಿಕ, ಸಾಂಸ್ಕೃತಿಕ ಮತ್ತು ವಾಣಿಜ್ಯ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿತ್ತು ಎಂದರು. ಕೊಲಂಬಸ್ ಭಾರತವನ್ನು ಹುಡುಕಿಕೊಂಡು ಹೊರಟಿದ್ದು ಹಾಗೂ ವಾಸ್ಕೊ ಡ ಗಾಮ ಭಾರತಕ್ಕೆ ಬಂದ ಇತಿಹಾಸವನ್ನು ಉಲ್ಲೇಖಿಸಿದ ಅವರು, ಯುವಜನರು ಭಾರತದ ಇತಿಹಾಸ ಮತ್ತು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಅರಿಯಬೇಕು ಎಂದರು. ಹಿಂದೂ ಸಮಾಜದ ಒಗ್ಗಟ್ಟಿನಿಂದ ದೇಶದ ಭದ್ರತೆ ಹಾಗೂ ಅಖಂಡ ಭಾರತದ ಸಂಕಲ್ಪ ಸಾಧ್ಯ ಎಂದರು.
ಮುಖ್ಯ ಅತಿಥಿ ರುದ್ರಾಂಶ ಕನ್ಸ್ಟ್ರಕ್ಷನ್ ಮಾಲಕ ಅಜಯ್ ದೀಕ್ಷಿತ್ ಶೆಟ್ಟಿ ಮಾತನಾಡಿ, ಇತಿಹಾಸವನ್ನು ತಿಳಿದುಕೊಳ್ಳುವುದರ ಜತೆಗೆ ಅದರಿಂದ ಪಾಠ ಕಲಿಯಬೇಕು ಎಂದರು. ಹಿಂದೂಗಳು ಹಾಗೂ ಗೋವುಗಳ ಸುರಕ್ಷತೆ, ಗೋ ಸಂರಕ್ಷಣೆ ಮತ್ತು ಸನಾತನ ಧರ್ಮದ ಕುರಿತು ಸಮಾಜ ಜಾಗೃತವಾಗಬೇಕು ಎಂದರು. ಭಾರತದ ವಿಭಜನೆ ಹಾಗೂ ಕೈಲಾಸ, ಮಾನಸ ಸರೋವರ, ಶಾರದಾ ಕ್ಷೇತ್ರ, ಹಿಂಗ್ಲಾಜ್ ಸೇರಿದಂತೆ ಐತಿಹಾಸಿಕವಾಗಿ ಭಾರತದೊಂದಿಗೆ ಬೆಸೆದುಕೊಂಡಿರುವ ಪ್ರದೇಶಗಳ ಕುರಿತು ಅರಿವು ಮೂಡಿಸಬೇಕು ಎಂದರು. ಭಾರತ ಕೇವಲ ಭೂಮಿಯ ತುಂಡಲ್ಲ, ಜೀವಂತ ರಾಷ್ಟ್ರಪುರುಷ ಎಂಬ ಅಟಲ್ ಬಿಹಾರಿ ವಾಜಪೇಯಿ ಅವರ ಮಾತನ್ನು ಉಲ್ಲೇಖಿಸಿದರು.
ವಿದ್ಯಾನಂದ ಶೆಟ್ಟಿ, ತಾಲೂಕು ಸಂಯೋಜಕ ಹರಿಶ್ಚಂದ್ರ ಕೆ.ಸಿ., ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ಧರೆಗುಡ್ಡೆ, ತಾಲೂಕು ಸಹಸಂಯೋಜಕರಾದ ಸಂತೋಷ್ ಕುಮಾರ್ ಮತ್ತು ಶರತ್ ಮಿಜಾರ್, ತಾಲೂಕು ಪ್ರಮುಖರಾದ ಸುಧಾಕರ್ ಹೆಗ್ಡೆ, ಸಮೃದ್ಧಿ ಹೆಗ್ಡೆ, ಉದಯ್ ಬನ್ನಡ್ಕ, ದೀಪಕ್ ಬನ್ನಡ್ಕ, ಶಿಶುಪಾಲ್ ಬನ್ನಡ್ಕ, ಜಗದೀಶ್ ಮೂಡಬಿದ್ರೆ, ನಾಗೇಂದ್ರ ಭಂಡಾರಿ, ಜಿಲ್ಲಾ ಪ್ರಮುಖ ಸಂದೀಪ್ ಹೆಗ್ಡೆ, ಭಾರತೀಯ ಜನತಾ ಪಾರ್ಟಿ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಮಾಜಿ ಪುರಸಭೆ ಸದಸ್ಯರಾದ ಲಕ್ಷ್ಮಣ್ ಪೂಜಾರಿ, ನಾಗರಾಜ್ ಪೂಜಾರಿ, ವಿಶ್ವ ಹಿಂದೂ ಪರಿಷತ್ ಪ್ರಮುಖ ಶಾಮ್ ಹೆಗ್ಡೆ, ಬಿಜೆಪಿ ಪ್ರಮುಖರಾದ ಅಶೋಕ್ ಶೆಟ್ಟಿ ಬೇಲೂಟ್ಟು, ಸೋಮನಾಥ್ ಕೋಟ್ಯಾನ್, ಜಯಂತ್ ಹೆಗ್ಡೆ ಹಾಗೂ ಶಿತ್ತಾಡಿ ಬಿಲ್ಲವ ಸಂಘದ ಅಧ್ಯಕ್ಷ ಸೋಮನಾಥ್ ಶಾಂತಿ ಉಪಸ್ಥಿತರಿದ್ದರು.
ಪಂಜಿನ ಬೆಳಕು, ಭಜನಾ ತಂಡಗಳ ಗಾಯನ ಮತ್ತು ರಾಷ್ಟ್ರಭಕ್ತಿಯ ಘೋಷಣೆಗಳ ನಡುವೆ ಸಾಗಿದ ಮೆರವಣಿಗೆ ಮೂಡುಬಿದಿರೆಯ ಪ್ರಮುಖ ರಸ್ತೆಯಲ್ಲಿ ಗಮನ ಸೆಳೆಯಿತು.