ಮೂಡುಬಿದಿರೆ: ಆಶಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ಕಳೆದ ಸಾಲಿನಲ್ಲಿ ರೂ.300 ಕೋಟಿ ವ್ಯವಹಾರ ದಾಖಲಿಸಿದ್ದು, ಸದಸ್ಯರ ಹಿತದೃಷ್ಟಿಯಿಂದ ಹಲವು ಹೊಸ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದೆ. ಸಂಘದ ಹದಿಮೂರನೇ ಸಾಮಾನ್ಯ ಮಹಾಸಭೆ ಹಾಗೂ ಹನ್ನೆರಡನೇ ವಾರ್ಷಿಕ ಮಹಾಸಭೆ ಶುಕ್ರವಾರ ಸಂಜೆ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಎಂ.ಕೆ. ಸುವ್ರತ್ ಕುಮಾರ್ ಮಾತನಾಡಿ, ಕಳೆದ 12–13 ವರ್ಷಗಳ ಸಂಸ್ಥೆಯ ಪಯಣ, ಸಾಧನೆಗಳು, ಸದಸ್ಯರಿಗೆ ನೀಡುತ್ತಿರುವ ಸೌಲಭ್ಯಗಳು ಹಾಗೂ ಮುಂದಿನ ಯೋಜನೆಗಳ ಕುರಿತು ವಿವರಿಸಿದರು. ಸಣ್ಣ ಸಹಕಾರಿ ಸಂಸ್ಥೆಯಾಗಿ ಆರಂಭಗೊಂಡ ಆಶಯ ಇಂದು ಕಾರ್ಕಳ ಮತ್ತು ಮೂಡುಬಿದಿರೆಯಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿಕೊಂಡಿದೆ. ಸದಸ್ಯರು, ಷೇರುದಾರರು, ನಿರ್ದೇಶಕರು ಹಾಗೂ ಸಿಬ್ಬಂದಿಯ ಸಹಕಾರದಿಂದ ಸಂಸ್ಥೆ ಬೆಳವಣಿಗೆ ಸಾಧಿಸಿದೆ ಎಂದರು.

ಕಾರ್ಕಳ ಶಾಖೆಯ ಸ್ವಂತ ಕಟ್ಟಡ ಸಂಸ್ಥೆಯ ಬೆಳವಣಿಗೆಯ ಪ್ರಮುಖ ಮೈಲಿಗಲ್ಲಾಗಿದೆ. ಮಾರ್ಚ್ 9, 2026ರಂದು ಉದ್ಘಾಟನೆಗೊಂಡ ಸುಮಾರು 3,200 ಚದರ ಅಡಿ ವಿಸ್ತೀರ್ಣದ ಕಟ್ಟಡದಲ್ಲಿ ಆಧುನಿಕ ಸೌಲಭ್ಯಗಳು, ಚಲನ ಸಂವೇದಕಗಳು ಹಾಗೂ ಬಲಿಷ್ಠ ಸುರಕ್ಷತಾ ಕೊಠಡಿ ಸೇರಿದಂತೆ ಭದ್ರತಾ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಮೂಡುಬಿದಿರೆ ಶಾಖೆಗೂ ಇದೇ ಮಾದರಿಯ ಸ್ವಂತ ಕಟ್ಟಡ ನಿರ್ಮಿಸುವ ಆಶಯ ವ್ಯಕ್ತವಾಯಿತು.

ಸದಸ್ಯರ ಪ್ರತಿಭೆ ಹಾಗೂ ಸೃಜನಶೀಲತೆಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ‘ಆಶಯ ಬುಲೆಟಿನ್’ ಅನ್ನು ಅನಾವರಣಗೊಳಿಸಲಾಯಿತು. ಸದಸ್ಯರು, ಸಿಬ್ಬಂದಿ ಹಾಗೂ ನಿರ್ದೇಶಕರ ಸಾಧನೆಗಳ ಜತೆಗೆ ಕಥೆ, ಕವನ, ಲೇಖನ ಸೇರಿದಂತೆ ಸಾಹಿತ್ಯಿಕ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತದೆ. ಸದಸ್ಯರ ಸಂಸ್ಥೆಗಳ ಜಾಹೀರಾತಿಗೂ ಅವಕಾಶ ಕಲ್ಪಿಸುವ ಮೂಲಕ ಅವರ ವ್ಯವಹಾರಿಕ ಪ್ರಗತಿಗೂ ಬುಲೆಟಿನ್ ನೆರವಾಗಲಿದೆ.

ಸದಸ್ಯರ ಆರೋಗ್ಯದ ದೃಷ್ಟಿಯಿಂದ ಸಂಘಕ್ಕೆ ಒಂಬತ್ತು ಆಮ್ಲಜನಕ ಸಾಂದ್ರಕಗಳು ಲಭಿಸಿದ್ದು, ಅಗತ್ಯ ಸಂದರ್ಭದಲ್ಲಿ ಸದಸ್ಯರಿಗೆ ₹100 ಸೇವಾ ಶುಲ್ಕದಲ್ಲಿ ಒದಗಿಸಲಾಗುವುದು ಎಂದು ಸುವ್ರತ್ ಕುಮಾರ್ ತಿಳಿಸಿದರು. ಕಳೆದ ವರ್ಷ ಸುಮಾರು 4,500 ಮಂದಿ ಇ-ಸ್ಟಾಂಪಿಂಗ್ ಸೇವೆಗಾಗಿ ಸಂಘದ ಕಚೇರಿಗೆ ಭೇಟಿ ನೀಡಿದ್ದರು ಎಂದರು. ಠೇವಣಿಗಳಿಗೆ ಶೇ.10.15ರಿಂದ ಶೇ.10.25ರವರೆಗೆ ಬಡ್ಡಿ ಹಾಗೂ ಶೇ.12ರಿಂದ ಚಿನ್ನದ ಸಾಲ ಸೌಲಭ್ಯ ನೀಡಲಾಗುತ್ತಿದೆ. ಎರಡು ಶಾಖೆಗಳನ್ನು ಹೊಂದಿರುವ ಆಶಯ ಕಳೆದ ಸಾಲಿನಲ್ಲಿ ರೂ.300 ಕೋಟಿ ವ್ಯವಹಾರ ದಾಖಲಿಸಿದೆ. ಆಂತರಿಕ ಶಿಸ್ತು ಮತ್ತು ಪಾರದರ್ಶಕತೆಗೆ ಒತ್ತು ನೀಡಲು ಆಂತರಿಕ ಲೆಕ್ಕಪರಿಶೋಧಕರ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದೆ.

ಉಪಾಧ್ಯಕ್ಷ ರಾಬರ್ಟ್ ರೊನಾಲ್ಡ್ ಫೆರ್ನಾಂಡಿಸ್ ಸ್ವಾಗತಿಸಿ, ಆಶಯದ ಬೆಳವಣಿಗೆಯಲ್ಲಿ ಸರ್ವ ಸದಸ್ಯರ ಸಹಕಾರವನ್ನು ಸ್ಮರಿಸಿದರು. ಹಿರಿಯ ನಿರ್ದೇಶಕ ಮೋಹನ್ ಪಡಿವಾಳ್ ಮಾತನಾಡಿ, ಅಧ್ಯಕ್ಷ ಎಂ.ಕೆ. ಸುವ್ರತ್ ಕುಮಾರ್ ನೇತೃತ್ವದಲ್ಲಿ ಆಶಯ ಸಹಕಾರಿ ಸಂಘವು ಇನ್ನಷ್ಟು ಪ್ರಗತಿ ಸಾಧಿಸಲಿ ಎಂದು ಹಾರೈಸಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಶೇಖರ್ ರಾವ್ ಸಾಧನೆಯ ವರದಿ ಮಂಡಿಸಿದರು. ಲೆಕ್ಕಪರಿಶೋಧಕ ಉಮೇಶ್ ರಾವ್ ಉಪಸ್ಥಿತರಿದ್ದರು. ನಿರ್ದೇಶಕ ನಿರಂಜನ್ ಜೈನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.