ಮೂಡುಬಿದಿರೆ: ಈಶ ಔಟ್‌ರೀಚ್ ಆಯೋಜಿಸಿರುವ 18ನೇ ಆವೃತ್ತಿಯ ‘ಈಶ ಗ್ರಾಮೋತ್ಸವ-2026’ರ ಕರ್ನಾಟಕ ವಿಭಾಗೀಯ ಕ್ರೀಡಾಕೂಟವು ಮೂಡುಬಿದಿರೆಯಲ್ಲಿ 300ಕ್ಕೂ ಹೆಚ್ಚು ಗ್ರಾಮೀಣ ಆಟಗಾರರ ಭಾಗವಹಿಸುವಿಕೆಯೊಂದಿಗೆ ಸಮಾಪ್ತಿಗೊಂಡಿತು. ಪುರುಷರ ವಾಲಿಬಾಲ್‌ನಲ್ಲಿ 18 ಹಾಗೂ ಮಹಿಳೆಯರ ಥ್ರೋಬಾಲ್‌ನಲ್ಲಿ 12 ತಂಡಗಳು ಸ್ಪರ್ಧಿಸಿದವು.
ಹಣೆಹಳ್ಳಿ ತಂಡಕ್ಕೆ ವಾಲಿಬಾಲ್ ಪ್ರಶಸ್ತಿ ಪುರುಷರ ವಾಲಿಬಾಲ್ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಣೆಹಳ್ಳಿಯ ಮುರಕುಂದೇಶ್ವರ ಹಣೆಹಳ್ಳಿ ತಂಡ ವಿಭಾಗೀಯ ಚಾಂಪಿಯನ್ ಆಯಿತು. ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡು ಗ್ರಾಮದ ಅಂಜನಾದ್ರಿ ತಂಡ ದ್ವಿತೀಯ, ದಕ್ಷಿಣ ಕನ್ನಡ ಜಿಲ್ಲೆಯ ಮುತೂರು ಗ್ರಾಮದ ಮಹಾಲಿಂಗೇಶ್ವರ ಬೊಳಿಯ ತಂಡ ತೃತೀಯ ಹಾಗೂ ಶಿವಮೊಗ್ಗ ಜಿಲ್ಲೆಯ ರೆಪ್ಪನಪೇಟೆಯ ಶ್ರೀ ಸಿದ್ಧಿವಿನಾಯಕ ತಂಡ ನಾಲ್ಕನೇ ಸ್ಥಾನ ಪಡೆದವು.
ಮಹಿಳೆಯರ ಥ್ರೋಬಾಲ್ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಡಗನ್ನೂರು ಗ್ರಾಮದ ಶ್ರೀಕೃಷ್ಣ ಪಟ್ಟೆ ತಂಡ ಚಾಂಪಿಯನ್ ಆಯಿತು. ಬೆಳಗಾವಿ ಜಿಲ್ಲೆಯ ಬಿ. ಬಾಗೇವಾಡಿಯ ರಾಣಿ ಚೆನ್ನಮ್ಮ ತಂಡ ದ್ವಿತೀಯ, ದಕ್ಷಿಣ ಕನ್ನಡ ಜಿಲ್ಲೆಯ ಬಡಗನ್ನೂರಿನ ಶಾಸ್ತಾರ ಪಡುಮಲೆ ತಂಡ ತೃತೀಯ ಹಾಗೂ ಧಾರವಾಡ ಜಿಲ್ಲೆಯ ತಿರ್ಲಾಪುರದ ಶ್ರೀರಾಮ್ ತಂಡ ನಾಲ್ಕನೇ ಸ್ಥಾನ ಗಳಿಸಿತು.
ಕರ್ನಾಟಕ ಗೇರು ಉತ್ಪಾದಕರ ಸಂಘವು ಪಂದ್ಯಾವಳಿಯಲ್ಲಿ ಭಾಗವಹಿಸಿದ ಆಟಗಾರರಿಗೆ 400 ಕಸಿ ಗೇರು ಸಸಿಗಳನ್ನು ಪ್ರಾಯೋಜಿಸಿತು. ಗ್ರಾಮೀಣ ಜೀವನೋಪಾಯ ಮತ್ತು ಸುಸ್ಥಿರತೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಉಪಕ್ರಮ ಕೈಗೊಳ್ಳಲಾಗಿದೆ.
10 ರಾಜ್ಯಗಳಿಗೆ ವಿಸ್ತರಣೆ 2004ರಲ್ಲಿ ಆರಂಭವಾದ ಈಶ ಗ್ರಾಮೋತ್ಸವವು ಗ್ರಾಮೀಣ ಪ್ರದೇಶಗಳ ಸಾಂಪ್ರದಾಯಿಕ ಕ್ರೀಡೆಗಳನ್ನು ಪುನರುಜ್ಜೀವನಗೊಳಿಸುವುದು, ದೈಹಿಕ ಆರೋಗ್ಯ ಉತ್ತೇಜಿಸುವುದು ಹಾಗೂ ಸಮುದಾಯಗಳ ನಡುವಿನ ಬಾಂಧವ್ಯ ಗಟ್ಟಿಗೊಳಿಸುವ ಉದ್ದೇಶ ಹೊಂದಿದೆ. ಈ ವರ್ಷದ ಗ್ರಾಮೋತ್ಸವವು 10 ರಾಜ್ಯಗಳು ಹಾಗೂ ಪುದುಚೇರಿಗೆ ವಿಸ್ತರಿಸಿದ್ದು, 40 ಸಾವಿರಕ್ಕೂ ಹೆಚ್ಚು ಗ್ರಾಮಗಳನ್ನು ತಲುಪಿದೆ. ಸುಮಾರು 7 ಸಾವಿರ ತಂಡಗಳ ಮೂಲಕ 15 ಸಾವಿರ ಮಹಿಳಾ ಆಟಗಾರರು ಸೇರಿದಂತೆ 80 ಸಾವಿರಕ್ಕೂ ಹೆಚ್ಚು ಗ್ರಾಮೀಣ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ. ಕಳೆದ ಎರಡು ದಶಕಗಳಲ್ಲಿ 35 ಸಾವಿರಕ್ಕೂ ಹೆಚ್ಚು ಗ್ರಾಮಗಳ 2.6 ಲಕ್ಷಕ್ಕೂ ಅಧಿಕ ಗ್ರಾಮೀಣ ಆಟಗಾರರನ್ನು ಈಶ ಗ್ರಾಮೋತ್ಸವ ಒಳಗೊಂಡಿದೆ ಎಂದು ಆಯೋಜಕರು ತಿಳಿಸಿದ್ದಾರೆ.