ಮೂಡುಬಿದಿರೆ: ಮಾನವೀಯ ಮೌಲ್ಯಗಳನ್ನು ಜೀವಂತವಾಗಿರಿಸುವ ಶಕ್ತಿ ಸಾಹಿತ್ಯಕ್ಕಿದೆ. ಸಾಹಿತ್ಯದ ಉಳಿವು ಎಂದರೆ ಮನುಷ್ಯತ್ವದ ಉಳಿವು ಎಂದು ಖ್ಯಾತ ಸಾಹಿತಿ, ಬೋಧಕಿ ಹಾಗೂ ಬರಹಗಾರ್ತಿ ಡಾ. ಮಾನಸಾ ಕೀಳಂಬಿ ಹೇಳಿದರು.

ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಸಾಹಿತ್ಯ ಸಂಘದ ವತಿಯಿಂದ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸಾಹಿತ್ಯ: ‘ಇ’ ಹೊತ್ತಗೆ – ಈ ಹೊತ್ತಿಗೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಾಗತಿಕ ಬದಲಾವಣೆಗಳಿಗೆ ಅನುಗುಣವಾಗಿ ಸಾಹಿತ್ಯದ ಸ್ವರೂಪವೂ ಬದಲಾಗುತ್ತಿದ್ದು, ಇ-ಪುಸ್ತಕಗಳು ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಹೆಚ್ಚಿನ ಓದುಗರನ್ನು ತಲುಪುತ್ತಿದೆ. ಅಪರೂಪದ ಹಾಗೂ ಹಳೆಯ ಕೃತಿಗಳನ್ನು ಡಿಜಿಟಲ್ ಮೂಲಕ ಸುಲಭವಾಗಿ ಓದಬಹುದು ಎಂದರು.

ಆರ್ಥಿಕ ವಿಚಾರಗಳು, ಮಕ್ಕಳ ಮಾನಸಿಕ ಆರೋಗ್ಯ, ಲಿಂಗಾಧಾರಿತ ವಿಚಾರಗಳು ಹಾಗೂ ಸಾಮಾಜಿಕ ಬದಲಾವಣೆಗಳು ಸಾಹಿತ್ಯದ ವಸ್ತುಗಳಾಗುತ್ತಿವೆ. ಶುದ್ಧ ಭಾಷೆಯ ಬಳಕೆ ಕಡಿಮೆಯಾಗುತ್ತಿರುವ ಆತಂಕವಿದ್ದರೂ, ಹೊಸ ತಲೆಮಾರನ್ನು ಸಾಹಿತ್ಯದತ್ತ ಸೆಳೆಯುವಲ್ಲಿ ಡಿಜಿಟಲ್ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಸಾಹಿತ್ಯ ಮಾನವೀಯತೆಯನ್ನು ಬೆಳೆಸುವುದರ ಜತೆಗೆ ಉತ್ತಮ ಚಿಂತನೆ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುತ್ತದೆ ಎಂದರು.

ಪ್ರಾಂಶುಪಾಲ ಮೊಹಮ್ಮದ್ ಸದಾಕತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಹಿಂದಿ ವಿಭಾಗದ ಉಪನ್ಯಾಸಕ ರಾಮಕೃಷ್ಣ ಸ್ವಾಗತಿಸಿದರು. ಕನ್ನಡ ವಿಭಾಗದ ಉಪನ್ಯಾಸಕ ಡಿ.ವಿ. ಪ್ರಕಾಶ್ ಅತಿಥಿಗಳನ್ನು ಪರಿಚಯಿಸಿದರು. ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ವೇದಾವತಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ವಿಭಾಗದ ಮಹೇಶ್ ವಂದಿಸಿದರು. ಕಾಲೇಜಿನ ಉಪಪ್ರಾಂಶುಪಾಲೆ ಜಾನ್ಸಿ ಪಿ ಎನ್ ಹಾಗೂ ಕಲಾ ವಿಭಾಗದ ಮುಖ್ಯಸ್ಥ ವೇಣುಗೋಪಾಲ್ ಶೆಟ್ಟಿ ಇದ್ದರು.