ಮೂಡುಬಿದಿರೆ: ಇಲ್ಲಿನ ಭಂಡಾರಿ ಸಮಾಜ ಸೇವಾ ಸಂಘದ ಆಶ್ರಯದಲ್ಲಿ 13ನೇ ವರ್ಷದ ‘ಆಟಿಡೊಂಜಿ ದಿನ’ ಕಾರ್ಯಕ್ರಮ ಆಗಸ್ಟ್ 9ರಂದು ಮೂಡುಬಿದಿರೆ ಎಂಸಿಎಸ್ ಬ್ಯಾಂಕಿನ ಕಲ್ಪವೃಕ್ಷ ಸಭಾ ವೇದಿಕೆಯಲ್ಲಿ ತುಳುನಾಡಿನ ಸಂಸ್ಕೃತಿ, ಆಹಾರ ಪದ್ಧತಿ ಮತ್ತು ಜಾನಪದ ಪರಂಪರೆಯೊಂದಿಗೆ ನಡೆಯಿತು.
ಗುರುಪ್ರಸಾದ್ ಭಂಡಾರಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಾಣೂರು ಕೆ.ವಿ. ಭಂಡಾರಿ ಉದ್ಘಾಟಿಸಿದರು. ಭಂಡಾರಿ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ವಿಶ್ವ ಭಂಡಾರಿ ಉಜಿರೆ ಮಾತನಾಡಿ, ಮೂಡುಬಿದಿರೆ ಭಂಡಾರಿ ಸಂಘದ ಸಾಧನೆಗಳನ್ನು ಶ್ಲಾಘಿಸಿ, ಸಮುದಾಯ ಭವನ ನಿರ್ಮಾಣಕ್ಕೆ ಮಹಾಮಂಡಲದ ವತಿಯಿಂದ ಪೂರಕ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು.
ಚಲನಚಿತ್ರ ಹಾಗೂ ರಂಗಭೂಮಿ ನಿರ್ದೇಶಕ ಕೀರ್ತನ್ ಭಂಡಾರಿ ಕುಳಾಯಿ ಆಟಿ ತಿಂಗಳ ಮಹತ್ವವನ್ನು ವಿವರಿಸಿದರು. ಯುವ ಲೇಖಕ ಕಿಶೋರ್ ಕುಮಾರ್ ಎಕ್ಕಾರು ಆಟಿ ತಿಂಗಳ ಹಳೆಯ ಆಚರಣೆಗಳು ಮತ್ತು ಪದ್ಧತಿಗಳ ಕುರಿತು ಮಾಹಿತಿ ನೀಡಿದರು. ಮಾಜಿ ಅಧ್ಯಕ್ಷ ಹಾಗೂ ಹಾಲಿ ಗೌರವ ಸಲಹೆಗಾರ ಕೆ.ಎನ್. ಪ್ರಕಾಶ್ ಭಂಡಾರಿ ಸಂಘದ ಸಾಧನೆಗಳನ್ನು ವಿವರಿಸಿ, ಮುಂದಿನ ಕಾರ್ಯಚಟುವಟಿಕೆಗಳಿಗೆ ಭಂಡಾರಿ ಬಂಧುಗಳ ಸಹಕಾರ ಕೋರಿದರು.
ಗೌರವಾಧ್ಯಕ್ಷರಾದ ವಾಸುದೇವ ಭಂಡಾರಿ, ಸುಮಿತ್ರ ಭಂಡಾರಿ ಕಾನ, ವಸಂತಿ ಜೆ. ಭಂಡಾರಿ, ಶಾಂತ ಕೆ. ಭಂಡಾರಿ ಹಾಗೂ ಶಾಂತ ವಿ. ಭಂಡಾರಿ ಸಾಣೂರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಗುರುಪ್ರಸಾದ್ ಭಂಡಾರಿ ಸಂಘದ ಕಾರ್ಯಚಟುವಟಿಕೆಗಳಿಗೆ ಸಹಕರಿಸಿದ ಭಂಡಾರಿ ಬಂಧು-ಮಿತ್ರರನ್ನು ಅಭಿನಂದಿಸಿ, 60 ಬಗೆಯ ತಿನಿಸುಗಳನ್ನು ತಯಾರಿಸಿ ನೀಡಿದ 60 ಕುಟುಂಬಗಳಿಗೆ ಕೃತಜ್ಞತೆ ಸಲ್ಲಿಸಿದರು.
60 ಬಗೆಯ ತುಳುನಾಡಿನ ಖಾದ್ಯಗಳ ಅನಾವರಣವನ್ನು ಭಂಡಾರಿ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಭಂಡಾರಿ ಉಜಿರೆ ನೆರವೇರಿಸಿದರು. ಆಟಿ ಕಳಂಜನ ಕುಣಿತ, ಪಾರ್ದನ ಹಾಗೂ ವಿವಿಧ ತುಳು ಜಾನಪದ ನೃತ್ಯಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.
ತುಳುನಾಡಿನ ಕೊಡಿ ಮರ್ಧದಲ್ಲಿರುವ 46 ಬಗೆಯ ಔಷಧೀಯ ಸಸ್ಯಗಳನ್ನು ಗುರುತಿಸುವ ಸ್ಪರ್ಧೆಯನ್ನು ಅಶೋಕ್ ಭಂಡಾರಿ ಮತ್ತು ನೀಲಯ್ಯ ಭಂಡಾರಿ ನಿರ್ವಹಿಸಿದರು. ತುಳು ಜಾನಪದ ನೃತ್ಯಗಳ ನೇತೃತ್ವವನ್ನು ರೇಣುಕಾ ಭಂಡಾರಿ ಬಸವನಕಜೆ ಮತ್ತು ಸವಿತಾ ಭಂಡಾರಿ ಬೆಳುವಾಯಿ ವಹಿಸಿದ್ದರು. ಭಂಡಾರಿ ಬಂಧುಗಳಿಗಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ನೇತೃತ್ವವನ್ನು ಪ್ರಕಾಶ್ ಭಂಡಾರಿ ಮತ್ತು ಸತೀಶ್ ಭಂಡಾರಿ ವಹಿಸಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಭಂಡಾರಿ ಸ್ವಾಗತಿಸಿದರು. ಪ್ರಶಾಂತ್ ಕೆ. ಭಂಡಾರಿ ನಿರೂಪಿಸಿದರು. ಶ್ರೀಧರ್ ಭಂಡಾರಿ ವಂದಿಸಿದರು. ರೇಣುಕಾ ಭಂಡಾರಿ ಮತ್ತು ರೇಷ್ಮಾ ಭಂಡಾರಿ ಪ್ರಾರ್ಥಿಸಿದರು. ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಭಂಡಾರಿ ಬಂಧು-ಮಿತ್ರರ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಿತು.