ಮೂಡುಬಿದಿರೆ: ಆಟಿ ತಿಂಗಳ ಅಮಾವಾಸ್ಯೆಯಂದು ಬ್ರಾಹ್ಮೀ ಮುಹೂರ್ತದಲ್ಲಿ ಹಾಲೆಮರದ (ಸಪ್ತಪರ್ಣ) ಕೆತ್ತೆಯನ್ನು ಸಂಗ್ರಹಿಸಿ, ಬೆಳ್ಳುಳ್ಳಿ, ಜೀರಿಗೆ, ಕಹಿಜೀರಿಗೆ, ಶುಂಠಿ, ಕಾಳುಮೆಣಸು, ಓಮ, ಮೆಂತೆ ಸೇರಿದಂತೆ ವಿವಿಧ ದ್ರವ್ಯಗಳನ್ನು ಸೇರಿಸಿ ತಯಾರಿಸುವ ಆಟಿ ಕಷಾಯವನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಿ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂಬುದು ಶಾಸ್ತ್ರೀಯ ನಂಬಿಕೆ ಹಾಗೂ ಪರಂಪರೆಯ ಆಚರಣೆಯಾಗಿದೆ.
ಈ ಹಿನ್ನೆಲೆಯಲ್ಲಿ ವಿದ್ಯಾಗಿರಿಯ ಆಳ್ವಾಸ್ ಆಯುರ್ವೇದ ಕಾಲೇಜಿನ ದ್ರವ್ಯಗುಣ ವಿಜ್ಞಾನ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ಪರಂಪರೆಯಂತೆ ತಯಾರಿಸಿದ ಆಟಿ ಕಷಾಯವನ್ನು ಉಚಿತವಾಗಿ ವಿತರಿಸಲಾಯಿತು.
ಬಿ.ಎಸ್.ಎನ್.ಎಲ್.ನ ನಿವೃತ್ತ ಅಧಿಕಾರಿ ಕೃಷ್ಣವೇಣಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದ್ರವ್ಯಗುಣ ವಿಜ್ಞಾನ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಹಾಗೂ ಆತ್ಮ ರಿಸರ್ಚ್ ಸೆಂಟರ್‌ನ ನಿರ್ದೇಶಕರಾದ ಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಪದ್ಯಾಣ ಆಟಿ ಕಷಾಯದ ಮಹತ್ವವನ್ನು ವಿವರಿಸಿ ಸ್ವಾಗತಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಸುಶೀಲ್ ಶೆಟ್ಟಿ ಹಾಗೂ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸುರೇಖ ಪೈ ಉಪಸ್ಥಿತರಿದ್ದರು. ಡಾ. ಸೌಜನ್ಯ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಡಾ. ಲಕ್ಷ್ಮೀ ಪೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಂಸ್ಥೆಯ ಅಧ್ಯಕ್ಷ ಡಾ. ಮೋಹನ ಆಳ್ವರ ನಿರ್ದೇಶನ ಹಾಗೂ ಮಾರ್ಗದರ್ಶನದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಾರ್ವಜನಿಕರು ಸೇರಿದಂತೆ 3,000ಕ್ಕೂ ಅಧಿಕ ಮಂದಿಗೆ ಆಟಿ ಕಷಾಯವನ್ನು ವಿತರಿಸಲಾಯಿತು.