ಮೂಡುಬಿದಿರೆ: ತಹಶೀಲ್ದಾರ್ ನೇತೃತ್ವದಲ್ಲಿ ನಡೆದ ಎಸ್‌ಸಿ-ಎಸ್‌ಟಿ ಕುಂದುಕೊರತೆ ಸಭೆಗೆ ಸಂಬಂಧಿಸಿ ಕೆಲವರು ಮಾಡಿರುವ ಅಪಪ್ರಚಾರದ ಬಗ್ಗೆ ನಿಖರ ಮಾಹಿತಿ ನೀಡುವ ಉದ್ದೇಶದಿಂದ ಸುವರ್ಣ ಕರ್ನಾಟಕ ರಾಜ್ಯ ಸಮಿತಿ ಜೈ ಭೀಮ್ ಯುವಸೇನೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಸ್ಪಷ್ಟನೆ ನೀಡಲಾಯಿತು.
ರಾಜ್ಯಾಧ್ಯಕ್ಷ, ಸಂಸ್ಥಾಪಕ ವರ್ತೂರ್ ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಭೆಗೆ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಡಿಒಗಳು, ಆರ್‌ಐ, ವಿಎ ಮತ್ತಿತರ ಅಧಿಕಾರಿಗಳು ಹಾಜರು ಇರಲಿಲ್ಲ. ಉಳಿದ ಅಧಿಕಾರಿಗಳು ಹಾಜರಿದ್ದರು . ವಿವಿಧ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲೇ ಚರ್ಚಿಸಿ ಪರಿಹರಿಸಿಕೊಳ್ಳುವ ಅವಕಾಶವಿತ್ತು ಎಂದು ವರ್ತೂರ್ ಮಂಜುನಾಥ್ ತಿಳಿಸಿದರು.
ಎಸ್‌ಸಿ ಸಮುದಾಯದಲ್ಲಿ ಹೆಚ್ಚಿನವರು ಕೂಲಿ ಕೆಲಸ ಮಾಡುತ್ತಿದ್ದು, ಉನ್ನತ ಹುದ್ದೆಯಲ್ಲಿರುವವರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಹಲವು ತಿಂಗಳುಗಳಿಂದ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಸಭೆಯನ್ನು ಸದುಪಯೋಗಪಡಿಸಿಕೊಳ್ಳಲು ಸಮಿತಿಯಿಂದ ಸುಮಾರು ಏಳು ಮಂದಿ ಹಾಜರಾಗಿದ್ದರು ಎಂದು ಹೇಳಿದರು.
ಸಭೆಯಲ್ಲಿ ಸುಮಾರು 25ರಿಂದ 30 ಮಂದಿ ಇದ್ದರು. ಕೆಲವರು ಸಭೆಯಿಂದ ಹೊರಗೆ ತೆರಳಿದ ಬಳಿಕವೂ ಸಮಸ್ಯೆಗಳ ಕುರಿತು ಚರ್ಚೆ ಮುಂದುವರಿಯಿತು. ತಹಶೀಲ್ದಾರ್ ಅವರು ಹಲವು ವಿಚಾರಗಳಿಗೆ ಸ್ಪಂದಿಸಿ, ಮುಂದಿನ ಸಭೆಗೆ ಸಂಬಂಧಪಟ್ಟವರಿಗೆ ನೋಟಿಸ್ ನೀಡುವುದಾಗಿ ತಿಳಿಸಿದ್ದರು. ಆದರೆ ವಿಷಯವನ್ನು ಸಂಪೂರ್ಣವಾಗಿ ತಿಳಿದುಕೊಳ್ಳದೆ ಸಭೆಯ ವಾತಾವರಣವನ್ನು ಬದಲಿಸುವ ರೀತಿಯಲ್ಲಿ ಏರಿದ ಧ್ವನಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ವರ್ತೂರ್ ಮಂಜುನಾಥ್ ಹೇಳಿದರು.
ಅಧಿಕಾರಿ ಯಾರೇ ಆಗಿದ್ದರೂ ಅವರ ಸ್ಥಾನಮಾನಕ್ಕೆ ಗೌರವ ನೀಡಿ, ಕಾನೂನುಬದ್ಧವಾಗಿ ಹಾಗೂ ಗೌರವಯುತವಾಗಿ ಸಮಸ್ಯೆಗಳನ್ನು ಮಂಡಿಸಬೇಕು. ಸಭೆಯ ಅಧ್ಯಕ್ಷರಾಗಿದ್ದ ತಹಶೀಲ್ದಾರ್ ಅವರ ಸಮ್ಮುಖದಲ್ಲಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಅವಕಾಶವಿದ್ದರೂ ಅದನ್ನು ಬಳಸಿಕೊಳ್ಳುವ ಪ್ರಯತ್ನ ನಡೆದಿಲ್ಲ ಎಂದು ಅವರು ಹೇಳಿದರು.
ಡಿಸಿ ಮನ್ನಾ ಜಾಗ, ಪೌತಿ ಖಾತೆ ಹಾಗೂ ಎಸ್‌ಸಿ ಸಮುದಾಯದ ಪೂರ್ವಿಕರ ಹೆಸರಿನಲ್ಲಿರುವ ಜಾಗಗಳ ಸಮಸ್ಯೆಯನ್ನೂ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಪೂರ್ವಿಕರ ಹೆಸರಿನಲ್ಲಿರುವ ಹೆಚ್ಚಿನ ಜಾಗಗಳನ್ನು ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಅನುಭವಿಸುವ ಅವಕಾಶ ಸಿಗದಿರುವ ಬಗ್ಗೆ ಗಮನ ಸೆಳೆಯಲಾಗಿದೆ. ಈ ವಿಚಾರದಲ್ಲಿ ಆಂದೋಲನ ನಡೆಸುವ ಮೂಲಕ ಆರ್ಥಿಕವಾಗಿ ಬೆಳೆಯಲು ಹಾಗೂ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಲಾಗಿದೆ. ಇದಕ್ಕೆ ಅಧಿಕಾರಿಗಳು ಸ್ಪಂದಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಟ್ರಾಫಿಕ್ ಸಮಸ್ಯೆಯ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪಿಸಲಾಗಿದ್ದು, ಈ ಕುರಿತು ತಹಶೀಲ್ದಾರ್ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ಆಯೋಜಿಸಲಾಗಿದೆ ಎಂದು ವರ್ತೂರ್ ಮಂಜುನಾಥ್ ಹೇಳಿದರು.
ಎಸ್‌ಸಿ-ಎಸ್‌ಟಿ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ತಹಶೀಲ್ದಾರ್ ಕಚೇರಿಯಲ್ಲಿ ಸಭೆ ನಡೆಸಬೇಕು ಎಂದು ಸಮಿತಿ ಒತ್ತಾಯಿಸಿದೆ. ಅಲ್ಲದೆ, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಿಂಗಳಿಗೆ ಒಂದು ದಿನಾಂಕ ನಿಗದಿಪಡಿಸಿ ಎಸ್‌ಸಿ-ಎಸ್‌ಟಿ ಸಮಸ್ಯೆಗಳ ಕುರಿತು ಸಭೆ ನಡೆಸಿದರೆ, ಸ್ಥಳೀಯವಾಗಿಯೇ ಹಲವು ಸಮಸ್ಯೆಗಳನ್ನು ಪರಿಹರಿಸಬಹುದು. ಪೊಲೀಸ್ ಠಾಣೆಗಳಲ್ಲಿ ಮೂರನೇ ವಾರದಲ್ಲಿ ಎಸ್‌ಸಿ-ಎಸ್‌ಟಿ ಸಭೆ ನಡೆಯುವ ರೀತಿಯಲ್ಲಿ ಪಂಚಾಯಿತಿಗಳಲ್ಲೂ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ.
ಸಭೆಯಲ್ಲಿ ಮಂಡಿಸಿದ ವಿಚಾರಗಳಿಗೆ ಅಧಿಕಾರಿಗಳು ಸ್ಪಂದಿಸಿದ್ದು, ಮುಂದಿನ ಸಭೆಯಲ್ಲಿ ಕ್ರಮಗಳ ಪ್ರಗತಿ ತಿಳಿಯಲಿದೆ ಎಂದು ಅವರು ಹೇಳಿದರು. ಸ್ಮಶಾನ ಜಾಗ ಹಾಗೂ ಪೌತಿ ಖಾತೆಗಳ ಸಮಸ್ಯೆಗಳ ಕುರಿತು ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಹಂತದಲ್ಲಿ ಆಂದೋಲನ ನಡೆಸುವ ಬಗ್ಗೆ ಭರವಸೆ ನೀಡಲಾಗಿದೆ ಎಂದು ತಿಳಿಸಿದರು.
ಮೂಡುಬಿದಿರೆ ತಾಲೂಕು ಘಟಕದ ಸದಸ್ಯ ರಾಜೇಶ, ಮೂಡುಬಿದಿರೆ ತಾಲೂಕು ಘಟಕದ ಸಹ ಕಾರ್ಯದರ್ಶಿ ಸಂತೋಷ್ ಕುಮಾರ್, ಉಡುಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಶಿಧರ್ ಕಾರ್ಕಳ, ದಕ್ಷಿಣ ಕನ್ನಡ ಜಿಲ್ಲೆಯ ಸದಸ್ಯ ಹಾಗೂ ಮೂಡುಬಿದಿರೆ ತಾಲೂಕು ಘಟಕದ ಸದಸ್ಯ ದಯಾನಂದ್ ಹಾಗೂ ಮೂಡುಬಿದಿರೆ ತಾಲೂಕು ಘಟಕದ ಸದಸ್ಯ ಸುನಿಲ್ ಅವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.