ವೇಣೂರು: ಮಾನವ ಎಷ್ಟೇ ಶ್ರೀಮಂತಿಕೆಯನ್ನು ಹೊಂದಿದ್ದರೂ ಮಾನಸಿಕ ನೆಮ್ಮದಿ ಲಭಿಸಲು ಧಾರ್ಮಿಕ ಶ್ರದ್ಧಾಕೇಂದ್ರಗಳ ಅಗತ್ಯವಿದ್ದು, ಯುವಜನತೆ ಇಂತಹ ಪುಣ್ಯಕಾರ್ಯಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕು ಎಂದು ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಹೇಳಿದರು.

ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಪೊಸರಡ್ಕ ದೈವ, ಕೊಡಮಣಿತ್ತಾಯ, ವ್ಯಾಘ್ರ ಚಾಮುಂಡಿ ದೈವಸ್ಥಾನ ಮತ್ತು ಬ್ರಹ್ಮ ಬೈದರ್ಕಳ ಗರಡಿಯ ಬ್ರಹ್ಮಕುಂಭಾಭಿಷೇಕದ ಅಂಗವಾಗಿ ಏಪ್ರಿಲ್ 30ರಂದು ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅತೀ ಪುರಾತನ ಇತಿಹಾಸವಿರುವ ಈ ಶ್ರದ್ಧಾಕೇಂದ್ರವನ್ನು ಅಭಿವೃದ್ಧಿಪಡಿಸಿ ನಮಗೆಲ್ಲ ಈ ಪುಣ್ಯಕಾರ್ಯದಲ್ಲಿ ಭಾಗವಹಿಸುವ ಅವಕಾಶ ಲಭಿಸಿರುವುದು ಶ್ಲಾಘನೀಯ ಎಂದರು.

ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸದಾನಂದ ಪೂಜಾರಿ ಮಾತನಾಡಿ, ದೈವ-ದೇವರನ್ನು ಕಣ್ಣಾರೆ ಕಾಣಲು ಸಾಧ್ಯವಿಲ್ಲದಿದ್ದರೂ ಅವುಗಳ ಶಕ್ತಿಯನ್ನು ಅನುಭವಿಸಬಹುದು ಹಾಗೂ ದೈವತ್ವದ ಆರಾಧನೆಯು ನಮ್ಮನ್ನು ಕಷ್ಟಗಳಿಂದ ಪಾರು ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು. ಕ್ಷೇತ್ರದ ಆಡಳಿತ ಸಮಿತಿ ಗೌರವಾಧ್ಯಕ್ಷ ಹೇಮರಾಜ್ ಕೆ. ಬೆಳ್ಳಿಬೀಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಭೇಟಿ ನೀಡಿದ್ದರು.

ವೇದಿಕೆಯಲ್ಲಿ ಬ್ರಹ್ಮಕುಂಭಾಭಿಷೇಕ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ, ಅರಮಲೆ ಬೆಟ್ಟದ ಆಡಳಿತ ಮೊಕ್ತೇಸರ ಸುಕೇಶ್ ಕುಮಾರ್, ಜಿ.ಪಂ. ಮಾಜಿ ಅಧ್ಯಕ್ಷೆ ಜ್ಯೋತಿ ಸಾಲ್ಯಾನ್, ಯಮುನಾ ಗೋಪು ಪೂಜಾರಿ, ಸನತ್ ಕುಮಾರ್ ಹೆಗ್ಡೆ, ಉದ್ಯಮಿ ದಯಾನಂದ ಬಂಗೇರ, ಜಯರಾಜ್ ಕಾಬಯ ಅಂಗಡಿಬೆಟ್ಟು ಗುತ್ತು, ಪ್ರಧಾನ ಕಾರ್ಯದರ್ಶಿ ಶೀತಲ್ ಕುಮಾರ್ ಜೈನ್, ಸದಾನಂದ ಹೆಗ್ಡೆ ಕೋಡಿಚ್ಚೂರು, ಪದ್ಮರಾಜ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕ ದಿವಾಕರ ಹೆಗ್ಡೆ, ದೇಜಮ್ಮ ಗಾಂದ್ಯೊಟ್ಟ, ಸನತ್ ಕುಮಾರ್ ಜೈನ್, ಶಶಿಕಾಂತ್ ಜೈನ್, ಆಡಳಿತ ಸಮಿತಿ ಅಧ್ಯಕ್ಷ ಜಯವರ್ಮ ಬುಣ್ಣು, ಗೌರವಾಧ್ಯಕ್ಷ ರಾಜೇಂದ್ರ ಬಳ್ಳಾಲ್, ಕಾರ್ಯಾಧ್ಯಕ್ಷ ಎಂ.ಎಸ್. ಪೂಜಾರಿ ಹಾಗೂ ನಾರಾಯಣ ಪೂಜಾರಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸುಮಂತ್ ಕುಮಾರ್ ಜೈನ್, ಡಾ. ಸದಾನಂದ ಪೂಜಾರಿ, ಜಯರಾಜ ಕಾಬಯ ಅಂಗಡಿಬೆಟ್ಟು ಗುತ್ತು, ಸದಾನಂದ ಹೆಗ್ಡೆ ಕೋಡಿಚೂರು, ಪದ್ಮರಾಜ ಶೆಟ್ಟಿ ಹಾಗೂ ದಿವಾಕರ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.

ಮಾನ್ವಿ ಸಂತೋಷ್ ಪ್ರಾರ್ಥಿಸಿದರು. ಹೊರೆಕಾಣಿಕೆ ಸಮಿತಿ ಸಂಚಾಲಕ ಶುಭರಾಜ್ ಹೆಗ್ಡೆ ಸ್ವಾಗತಿಸಿ, ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಆದಿತ್ಯ ಪಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾರಸ ಮರೋಡಿ ವಂದಿಸಿದರು. ಸೌಮ್ಯ ಕೋಟ್ಯಾನ್ ಕೋಟೆಬಾಗಿಲು ಕಾರ್ಯಕ್ರಮ ನಿರ್ವಹಿಸಿದರು.

ಬೆಳಿಗ್ಗೆ ಪುನರ್ ಪ್ರತಿಷ್ಠಾಪಿಸಲಾದ ಪರಿವಾರ ದೈವಗಳಿಗೆ ಬ್ರಹ್ಮಕುಂಭಾಭಿಷೇಕ ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮಗಳು, ಭರತನಾಟ್ಯ ಹಾಗೂ ಜಾನಪದ ನೃತ್ಯ ನಡೆದವು. ರಾತ್ರಿ ದೈವಗಳ ನೇಮೋತ್ಸವ ಜರುಗಿತು.

ಮೇ 1ರಂದು ಸಂಜೆ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದಿಂದ 'ಸಿಂಧೂರ ಸಂಗ್ರಾಮ' ಯಕ್ಷಗಾನ ನಡೆಯಲಿದೆ. ಅಂತಿಮ ದಿನದ ಧಾರ್ಮಿಕ ಸಭೆಯಲ್ಲಿ ರಕ್ಷಿತ್ ಶಿವರಾಮ್ ಅಧ್ಯಕ್ಷತೆ ವಹಿಸಲಿದ್ದು, ಜೀವಂಧರ ಕುಮಾರ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಕೆ. ಅನಂತ ಅಸ್ರಣ್ಣ, ಅನಿಲ್ ಕುಮಾರ್ ಎಸ್., ಕಿರಣ್ ಚಂದ್ರ ಪುಷ್ಪಗಿರಿ ಹಾಗೂ ಮೋಹನ್ ಕುಮಾರ್ ಪಾಲ್ಗೊಳ್ಳಲಿದ್ದಾರೆ. ರಾತ್ರಿ ಬ್ರಹ್ಮ ಬೈದರ್ಕಳ ಹಾಗೂ ಮಾಯಂದಾಲೆ ನೇಮೋತ್ಸವ ನಡೆಯಲಿದೆ..