ಮೂಡುಬಿದಿರೆ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತ್ಯೇಕ ಸ್ಥಳಗಳಲ್ಲಿ ಇಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ನಡೆದಿವೆ.
ಮಾರ್ಪಾಡಿ ಗ್ರಾಮದ ಕೋಟೆಬಾಗಿಲು ನಿವಾಸಿ ಜ್ಯೋತಿ (59) ಮಂಗಳವಾರ ರಾತ್ರಿ ತಮ್ಮ ಮಗಳ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಪತಿ ಐದು ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು. ಸ್ವೀಪರ್ ಕೆಲಸ ಮಾಡುತ್ತಿದ್ದ ಜ್ಯೋತಿ ಅವರು ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅನಾರೋಗ್ಯದ ಸಮಸ್ಯೆಯಿಂದ ಬೇಸತ್ತು ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ತೋಡಾರು ಗ್ರಾಮದ ಶಾಂತಿಗುರಿ ನಿವಾಸಿ ವಿಶ್ವನಾಥ (36) ಬುಧವಾರ ತಮ್ಮ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಲಿ ಕೆಲಸ ಮಾಡುತ್ತಿದ್ದ ವಿಶ್ವನಾಥ್ ಕುಡಿತದ ಚಟಕ್ಕೆ ದಾಸರಾಗಿದ್ದರು. ಇದರಿಂದ ಮನನೊಂದ ಅವರ ಪತ್ನಿ ಎರಡು ವಾರಗಳ ಹಿಂದಷ್ಟೇ ತವರು ಮನೆಗೆ ತೆರಳಿದ್ದರು. ಪತ್ನಿ ದೂರವಾದ ದುಃಖದಲ್ಲಿ ಮನನೊಂದ ವಿಶ್ವನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಮೃತರು ಒಬ್ಬ ಪುತ್ರನನ್ನು ಹೊಂದಿದ್ದಾರೆ. ಈ ಎರಡೂ ಪ್ರಕರಣಗಳ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.