ಮೂಡುಬಿದಿರೆ: ಪೇಟೆಯ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಮತ್ತು ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ
12 ಮತ್ತು 16 ಚಕ್ರಗಳ ಭಾರಿ ವಾಹನಗಳು ರಿಂಗ್ ರೋಡ್ ಮೂಲಕವೇ ಸಂಚರಿಸಬೇಕು. ಅನಗತ್ಯವಾಗಿ ನಗರದೊಳಗೆ ಬರುವ ಇಂತಹ ವಾಹನಗಳನ್ನು ತಕ್ಷಣವೇ ವಾಪಸ್ ಕಳುಹಿಸಬೇಕು ಅಥವಾ ಕಾನೂನು ರೀತ್ಯ ಕೇಸ್ ದಾಖಲಿಸಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದರು.
ನಮ್ಮ ಮೂಡುಬಿದಿರೆ ಸಂಯೋಜನೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅವರು ಪೊಲೀಸ್ ಹಾಗೂ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು
ನಗರದಲ್ಲಿ ನೋ ಎಂಟ್ರಿ ನಿಯಮ ಉಲ್ಲಂಘನೆ, ಹೆಲ್ಮೆಟ್ ರಹಿತ ಚಾಲನೆ ಹಾಗೂ ತ್ರಿಬಲ್ ರೈಡಿಂಗ್ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ನೋ ಎಂಟ್ರಿ ರಸ್ತೆಗಳಲ್ಲಿ ವಾಹನಗಳು ಪ್ರವೇಶಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಅಪಘಾತಗಳಿಗೂ ಕಾರಣವಾಗುತ್ತಿದೆ. ಸಂಚಾರ ಸುಧಾರಣೆಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳು, ಅಗತ್ಯವಿರುವ ಸಮಯ ಹಾಗೂ ಸ್ಥಳೀಯ ರೋಟರಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಾಮಫಲಕಗಳನ್ನು ಅಳವಡಿಸುವ ಬಗ್ಗೆ ಯೋಜನೆ ರೂಪಿಸಬಹುದು ಎಂದರು.
ವಿದ್ಯಾಗಿರಿಯಿಂದ ಮಾಸ್ತಿಕಟ್ಟೆ ರಸ್ತೆಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಮಾಸ್ತಿಕಟ್ಟೆಯ ರಸ್ತೆ ದುರಸ್ತಿಗೆ ಈಗಾಗಲೇ ಪುರಸಭೆಗೆ ಸೂಚನೆ ನೀಡಲಾಗಿದೆ. ಬೆಳ್ತಂಗಡಿ, ಕಾರ್ಕಳ ಹಾಗೂ ಬಿ.ಸಿ ರೋಡ್ ಕಡೆಗೆ ಹೋಗುವ ವಾಹನ ಸವಾರರ ಅನುಕೂಲಕ್ಕಾಗಿ ಪುರಸಭೆ ಮತ್ತು ಪೊಲೀಸ್ ಇಲಾಖೆಯು ಜಂಟಿಯಾಗಿ ಸೂಕ್ತ ಮಾರ್ಗದರ್ಶಿ ನಾಮಫಲಕಗಳನ್ನು ಅಳವಡಿಸಬೇಕು . ಇದರಿಂದಾಗಿ ಭಾರಿ ವಾಹನಗಳು ಮೂಡುಬಿದಿರೆ ನಗರದೊಳಗೆ ಪ್ರವೇಶಿಸುವುದು ತಪ್ಪಲಿದೆ. ಈ ಕುರಿತು ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳನ್ನು ಒಳಗೊಂಡ ವಿಶೇಷ ಸಂಚಾರ ಸಭೆಯನ್ನು ನಡೆಸಿ ಸೂಕ್ತ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಸಂಚಾರ ದಟ್ಟಣೆ ಹಾಗೂ ಗೊಂದಲ ನಿವಾರಣೆಗಾಗಿ ಸಾವಿರ ಕಂಬದ ಬಸದಿಯ ಬಳಿ ವಾಹನಗಳು ಸ್ಪಷ್ಟವಾಗಿ ಕಾಣಿಸುವಂತೆ ಕನ್ನಡಿ ಅಳವಡಿಸಲು ಪುರಸಭೆಗೆ ಸೂಚಿಸಲಾಗಿದೆ. ಹಳೆಯ ಪೊಲೀಸ್ ಸ್ಟೇಷನ್ ಬಳಿ ಎದುರಾಗುತ್ತಿದ್ದ ಸಂಚಾರ ಸಮಸ್ಯೆಯನ್ನು ಮನಗಂಡು, ಅನುಮತಿ ವಿಳಂಬವಾದರೂ ಸಾರ್ವಜನಿಕ ಹಿತದೃಷ್ಟಿಯಿಂದ ಹಳೆಯ ಕಟ್ಟಡವನ್ನು ತೆರವುಗೊಳಿಸಲಾಗಿದೆ. ಈ ಜಾಗದಲ್ಲಿ ವಾಹನಗಳು ಶಿಸ್ತುಬದ್ಧವಾಗಿ ಸಂಚರಿಸಲು ಅನುವಾಗುವಂತೆ ಒಂದು ಅಥವಾ ಒಂದೂವರೆ ಮೀಟರ್ ಉದ್ದದ ಸಣ್ಣ ಡಿವೈಡರ್ ನಿರ್ಮಿಸಲು ಪುರಸಭೆಯ ಮುಖ್ಯ ಅಧಿಕಾರಿಗೆ ನಿರ್ದೇಶನ ನೀಡಲಾಗಿದೆ. ಪೊಲೀಸ್ ಇಲಾಖೆಯು ಸ್ಥಳ ಪರಿಶೀಲನೆ ನಡೆಸಿ ಇದಕ್ಕೆ ಸೂಕ್ತ ಮಾರ್ಗದರ್ಶನ ನೀಡಲಿದ್ದು, ಈ ಸಭೆಯು ಕೇವಲ ಔಪಚಾರಿಕವಾಗದೇ ಪ್ರಾಯೋಗಿಕ ಬದಲಾವಣೆಗೆ ನಾಂದಿಯಾಗಲಿದೆ ಎಂದು ಶಾಸಕರು ತಿಳಿಸಿದ್ದಾರೆ.
ಪುರಸಭೆ ಮುಖ್ಯ ಅಧಿಕಾರಿ ಇಂದು. ಎಂ, ಪೊಲೀಸ್ ಉಪನಿರೀಕ್ಷಿಕಿ ಪ್ರತಿಭಾ ಸಹಿತ ವಿವಿಧ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.