ಮೂಡುಬಿದಿರೆ: ನೋಮಿ ನೆಟ್ವರ್ಕ್ ಪ್ರಾಯೋಜಕತ್ವದಲ್ಲಿ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಯುವವಾಹಿನಿ ಮೂಡುಬಿದಿರೆ ಘಟಕ ಹಾಗೂ ವೀಚೀಸ್ ಕೌಶಲ್ಯ ಕೇಂದ್ರ ಮೂಡುಬಿದಿರೆ ಇವರ ಜಂಟಿ ಆಶ್ರಯದಲ್ಲಿ ನಡೆದ 15 ದಿನಗಳ ಉಚಿತ ಫ್ಯಾಷನ್ ಡಿಸೈನ್ ಕೌಶಲ್ಯ ತರಬೇತಿಯ ಸಮಾರೋಪ ಸಮಾರಂಭ ಮೂಡುಬಿದಿರೆ ವೀಚೀಸ್ ಕೌಶಲ್ಯ ಕೇಂದ್ರದಲ್ಲಿ ನಡೆಯಿತು. ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಮಾತನಾಡಿ, ಮಹಿಳೆಯರು ಕಾಲಕ್ಕೆ ತಕ್ಕಂತೆ ಮತ್ತು ಬೇಡಿಕೆಗೆ ಅನುಗುಣವಾಗಿ ಕೌಶಲ್ಯ ತರಬೇತಿಯನ್ನು ಕಲಿತು ಸ್ವ ಉದ್ಯೋಗ ಮಾಡಬೇಕು. ಬೇಡಿಕೆ ಇರುವಾಗ ಮನೆಯಲ್ಲಿಯೇ ಉದ್ಯೋಗ ಮಾಡಿ ಉತ್ತಮ ಆದಾಯ ಗಳಿಸಲು ಸಾಧ್ಯವಿದೆ ಎಂದರು. ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ತರಬೇತಿಯಲ್ಲಿ ಭಾಗವಹಿಸಿದ ಮಹಿಳೆಯರ ಕೌಶಲ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳೆಯರು ಸ್ವ ಉದ್ಯೋಗ ಮಾಡಲು ಯುವವಾಹಿನಿ ಸದಾ ನೆರವು ನೀಡಲಿದೆ ಎಂದು ಅವರು ಭರವಸೆ ನೀಡಿದರು. ವೀಚೀಸ್ ಕೌಶಲ್ಯ ಕೇಂದ್ರದ ನಿರ್ದೇಶಕಿ ಶುಭಲಕ್ಷ್ಮಿ ತರಬೇತಿಯ ನಂತರದ ಉದ್ಯೋಗಾವಕಾಶಗಳ ಬಗ್ಗೆ ವಿವರಿಸಿದರು. ತರಬೇತಿಯ ಸಂಪನ್ಮೂಲ ವ್ಯಕ್ತಿ ಅನಿತಾ ತರಬೇತಿ ನೀಡಿದ ತಮ್ಮ ಅನುಭವವನ್ನು ಹಂಚಿಕೊಂಡರು. ತರಬೇತಿಯಲ್ಲಿ ಭಾಗವಹಿಸಿದ ಮಹಿಳೆಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ತರಬೇತಿಯನ್ನು ಪೂರೈಸಿದ 27 ಮಹಿಳೆಯರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಜೆನಿಫರ್ ಕಾರ್ಯಕ್ರಮ ನಿರೂಪಿಸಿದರು, ಸರಸ್ವತಿ ಸ್ವಾಗತಿಸಿದರು. ಪ್ರಮೀಳಾ ವಂದಿಸಿದರು.