ಮೂಡುಬಿದಿರೆ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಧಿಕಾರಿಗಳ ಮತ್ತು ನೌಕರರ ಸಂಘ ಬೆಂಗಳೂರು ಹಾಗೂ ಜಿಲ್ಲಾ ಶಾಖೆ ಮಂಗಳೂರು ಇದರ ಜಿಲ್ಲಾಮಟ್ಟದ ಸಭೆ ಹಾಗೂ ಕುಂದು ಕೊರತೆಗಳ ಸಭೆಯನ್ನು ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಸಲಾಯಿತು.

ಸಂಘಟನೆಯ ರಾಜ್ಯ ಅಧ್ಯಕ್ಷ ಸುರೇಶ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ, ನೌಕರರ ಸಮಸ್ಯೆಗಳನ್ನು ಆಲಿಸಿದರು. ಸಭೆಯಲ್ಲಿ ಚರ್ಚಿಸಲಾದ ನೌಕರರ ವಿವಿಧ ಸಮಸ್ಯೆಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುವುದಾಗಿ ಅವರು ಭರವಸೆ ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಸಂಘಟನೆಯ ಗೌರವಾಧ್ಯಕ್ಷ ಹಾಗೂ ಜಿಲ್ಲಾ ಯೋಜನಾ ನಿರ್ದೇಶಕ ಕೆ. ಇ ಜಯರಾಮ್, ಸುಳ್ಯ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ರಾಜಣ್ಣ ಮತ್ತು ಉಳ್ಳಾಲ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಗುರುದತ್ತ್ ಇಲಾಖೆಯಲ್ಲಿ ಸಂಘಟನೆಯ ಮಹತ್ವ ಹಾಗೂ ಅದರ ಅಗತ್ಯತೆಯ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು. ಈ ಜಿಲ್ಲಾಮಟ್ಟದ ಸಭೆಯಲ್ಲಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಲೆಕ್ಕ ಸಹಾಯಕರು ಹಾಗೂ ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ಜಿಲ್ಲಾಧ್ಯಕ್ಷ ಹಾಗೂ ಬಾಳೆಪುಣಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ. ವೆಂಕಟೇಶ್ ಮಾತನಾಡಿ, ಸಂಘಟನೆಗೆ ದೊರೆತ ಅಭೂತಪೂರ್ವ ಬೆಂಬಲಕ್ಕೆ ಧನ್ಯವಾದ ಸಮರ್ಪಿಸಿದರು. ಮಂಗಳೂರು ಜಿಲ್ಲಾ ಸಂಘವನ್ನು ಇಡೀ ರಾಜ್ಯದಲ್ಲೇ ಅತ್ಯುತ್ತಮ ಮಾದರಿ ಸಂಘವನ್ನಾಗಿ ಮಾಡಲು ಎಲ್ಲಾ ಅಧಿಕಾರಿಗಳು ಮತ್ತು ನೌಕರರು ನಿರಂತರ ಬೆಂಬಲ ನೀಡಬೇಕು ಎಂದು ಅವರು ವಿನಂತಿಸಿದರು.

ದರೆಗುಡ್ಡೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜು ಎಲ್ಲರಿಗೂ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು. ಕೋಳ್ನಾಡು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಪ್ರಸ್ತಾವಿಕವಾಗಿ ಮಾತನಾಡಿ ಸಭೆಯ ಉದ್ದೇಶಗಳನ್ನು ವಿವರಿಸಿದರು. ತಲಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂಧ್ಯಾ ಕಾರ್ಯಕ್ರಮಕ್ಕೆ ಬಂದಿದ್ದವರನ್ನು ಸ್ವಾಗತಿಸಿದರು. ಕರಿಯಂಗಳ ಗ್ರಾಮ ಪಂಚಾಯತ್ ಕಾರ್ಯದರ್ಶಿ ವಸಂತಿ ವಂದಿಸಿದರು. ತಲಪಾಡಿ ಗ್ರಾಮ ಪಂಚಾಯತ್ ಲೆಕ್ಕ ಸಹಾಯಕ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.