ಮೂಡುಬಿದಿರೆ: ಶಿಕ್ಷಣ, ಸಾಮಾಜಿಕ ಬದ್ಧತೆ ಹಾಗೂ ಸಂಶೋಧನಾ ಚಟುವಟಿಕೆಗಳ ಮೂಲಕ ವಿಶಿಷ್ಟ ಗುರುತು ಮೂಡಿಸಿರುವ ಎಕ್ಸಲೆಂಟ್ ಮೂಡುಬಿದಿರೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಅವರಿಗೆ ರಾಷ್ಟ್ರಮಟ್ಟದ ಪ್ರತಿಷ್ಠಿತ 'ಭಾರತ್ ರತ್ನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್' ಲಭಿಸಿದೆ. ನವದೆಹಲಿಯಲ್ಲಿ ನಡೆದ ಎಕನಾಮಿಕ್ ಗ್ರೋಥ್ ಫೌಂಡೇಶನ್ ಸಂಸ್ಥೆಯ ವಾರ್ಷಿಕ ಸಮಾವೇಶದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ಶಿಕ್ಷಣ ಕ್ಷೇತ್ರದಲ್ಲಿ ದೂರದೃಷ್ಟಿಯ ನಾಯಕತ್ವ, ಮೌಲ್ಯಾಧಾರಿತ ಶಿಕ್ಷಣದ ಅನುಷ್ಠಾನ ಹಾಗೂ ಸಂಶೋಧನಾ ಮನೋಭಾವದ ಗಮನಾರ್ಹ ಕೊಡುಗೆಗಳನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.
ಯುವರಾಜ್ ಜೈನ್ ಅವರ ಶೈಕ್ಷಣಿಕ ಪಯಣವು ಸಾಧನೆಗಳ ಇತಿಹಾಸವಾಗಿ ಗುರುತಿಸಿಕೊಂಡಿದೆ. 2003ರಲ್ಲಿ ನವದೆಹಲಿಯ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ಅಂಡ್ ಮ್ಯಾನೇಜ್ಮೆಂಟ್ ವತಿಯಿಂದ ಪ್ರದಾನವಾದ 'ಗ್ಲೋಬಲ್ ಅಂಬಾಸಿಡರ್ ಆಫ್ ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್' ಇವರ ಶೈಕ್ಷಣಿಕ ನಾಯಕತ್ವಕ್ಕೆ ದೊರೆತ ಪ್ರಮುಖ ಅಂತರರಾಷ್ಟ್ರೀಯ ಮನ್ನಣೆಯಾಗಿದೆ. ಅನಂತರ 2021ರಲ್ಲಿ 'ಶಿಕ್ಷಣ ರತ್ನ ಪ್ರಶಸ್ತಿ', 2022ರಲ್ಲಿ 'ಮಿಲನಶ್ರೀ ಪ್ರಶಸ್ತಿ', 2023ರಲ್ಲಿ 'ಸಮಾಜ ಮಂದಿರ ಪುರಸ್ಕಾರ', 2024ರಲ್ಲಿ 'ಸಿರಿಪುರ ಪ್ರಶಸ್ತಿ', 'ಶಿಕ್ಷಣ ಭೀಷ್ಮ ಪ್ರಶಸ್ತಿ' ಹಾಗೂ 'ವಿಶ್ವಶಾಂತಿ ವಿದ್ಯಾ ಸೇವಾ ರತ್ನ ಪ್ರಶಸ್ತಿ'ಗಳು ಇವರಿಗೆ ಸಂದಿವೆ.
2025ರಲ್ಲಿ ಸಿಂಗಾಪುರದಲ್ಲಿ ನಡೆದ ಅಂತರರಾಷ್ಟ್ರೀಯ ಜೈನ ಸಮ್ಮೇಳನದಲ್ಲಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗೆ ಲಭಿಸಿದ 'ಕರ್ನಾಟಕದ ಅತ್ಯುತ್ತಮ ಶಿಕ್ಷಣ ಸಂಸ್ಥೆ' ಗೌರವವು ಸಂಸ್ಥೆಯ ಶೈಕ್ಷಣಿಕ ಗುಣಮಟ್ಟಕ್ಕೆ ದೊರೆತ ಜಾಗತಿಕ ಮಾನ್ಯತೆಯಾಗಿದೆ. ಇದೇ ಅವಧಿಯಲ್ಲಿ ಗೋಪಾಲಕೃಷ್ಣ ಪ್ರತಿಷ್ಠಾನ, ಸಂಪಾಜೆ ವತಿಯಿಂದ 'ಕೇಶವಾನಂದ ಭಾರತಿ ಶಿಕ್ಷಣ ಪ್ರಶಸ್ತಿ' ಪ್ರದಾನಗೊಂಡಿದೆ. ಅಂತರರಾಷ್ಟ್ರೀಯ ಜೆಸಿಐ ಸಂಸ್ಥೆಯು ಸಮಾಜಕ್ಕೆ ಸಲ್ಲಿಸಿದ ಅಮೂಲ್ಯ ಕೊಡುಗೆಗಳನ್ನು ಗುರುತಿಸಿ ಇವರಿಗೆ 'ಸಾಧನಶ್ರೀ ಪ್ರಶಸ್ತಿ' ಹಾಗೂ 'ಕಮಲ ಪತ್ರ ರಾಷ್ಟ್ರೀಯ ಪ್ರಶಸ್ತಿ' ನೀಡಿ ಗೌರವಿಸಿದೆ.
ಶಿಕ್ಷಣ ಕ್ಷೇತ್ರದಲ್ಲಿ ಇವರ ನಾಯಕತ್ವ ಹಾಗೂ ಆಡಳಿತಾತ್ಮಕ ಸಾಮರ್ಥ್ಯವನ್ನು ಪರಿಗಣಿಸಿ, ಕರ್ನಾಟಕ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘ (KUPMA) ಇವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಜ್ಞಾನವನ್ನು ಪಠ್ಯಪುಸ್ತಕದ ಗಡಿಗಳಿಂದ ಹೊರತಂದು ಜೀವನ ಮೌಲ್ಯಗಳೊಂದಿಗೆ ಬೆಸೆಯುವ ಪ್ರಯತ್ನ ಹಾಗೂ ಶಿಕ್ಷಣ ಸಂಸ್ಥೆಯನ್ನು ವ್ಯಕ್ತಿತ್ವ ರೂಪಿಸುವ ಪ್ರೇರಣಾಕೇಂದ್ರವನ್ನಾಗಿ ರೂಪಿಸುವ ಮೂಲಕ ಯುವರಾಜ್ ಜೈನ್ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಹೆಜ್ಜೆಗುರುತು ಮೂಡಿಸಿದ್ದಾರೆ.