ಮೂಡುಬಿದಿರೆ: ಪಾಡ್ಯಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2026-27ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ಜರುಗಿತು.
ಪಡುಮಾರ್ನಾಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ್ ಚೌಟ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲೆಯ ಹಳೆ ವಿದ್ಯಾರ್ಥಿಗಳು ತರಗತಿಗಳನ್ನು ನಡೆಸಿದ ತಮ್ಮ ಹಳೆಯ ಶಾಲೆಯನ್ನು ಉಳಿಸಿ ಬೆಳೆಸುವ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಕಿವಿಮಾತು ಹೇಳಿದರು.
ಶಾಲಾ ಸ್ಥಾಪಕ ಹಾಗೂ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದಯಾನಂದ ಪೈ ವಿದ್ಯಾರ್ಥಿಗಳಿಗೆ ಸರಕಾರದಿಂದ ಒದಗಿಸಲಾದ ಪಠ್ಯಪುಸ್ತಕಗಳನ್ನು ವಿತರಿಸಿದರು. ಬಳಿಕ ಮಾತನಾಡಿದ ಅವರು, ಶಾಲೆ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ನಡೆದು ಬಂದಿರುವ ವಿವಿಧ ಹಂತದ ಬೆಳವಣಿಗೆಗಳು ಮತ್ತು ಸಾಧನೆಗಳನ್ನು ಸಭೆಗೆ ವಿವರಿಸಿದರು.
ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಹಲವು ರೀತಿಯ ಪ್ರೋತ್ಸಾಹಕಗಳನ್ನು ನೀಡುವ ಬಗ್ಗೆ ವಿವಿಧ ದಾನಿಗಳ ಸಹಕಾರ ಪಡೆದು ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯ ಶಿಕ್ಷಕರು ಮಾಹಿತಿ ನೀಡಿದರು.
ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯ ನಿತಿನ್ ಕೋಟ್ಯಾನ್, ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಆಚಾರ್ಯ ಉಪಸ್ಥಿತರಿದ್ದರು. ಪ್ರಭಾರ ಮುಖ್ಯ ಶಿಕ್ಷಕ ಪ್ರಸನ್ನ ವಿ.ಶೆಣೈ, ಸಹ ಶಿಕ್ಷಕ ರಾಬರ್ಟ್ ಡಿಸೋಜ, ಗೌರವ ಶಿಕ್ಷಕಿ ಪ್ರತಿಭಾ, ಸ್ವಯಂಸೇವಕ ಪ್ರಜ್ವಲ್, ಅಕ್ಷರ ದಾಸೋಹ ಸಿಬ್ಬಂದಿ ಕಸ್ತೂರಿ ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.