ಮೂಡುಬಿದಿರೆ: ಭಾರತೀಯ ಜನತಾ ಪಾರ್ಟಿ ಮೂಡುಬಿದಿರೆ ಮಂಡಲದ ಕಾರ್ಯಕಾರಣಿ ಸದಸ್ಯ ಕೇಶವ ಪಂಜಾಡಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಿ, ಪಕ್ಷದಿಂದ ಉಚ್ಚಾಟಿಸಲಾಗಿದೆ.
ಇತ್ತೀಚೆಗೆ ನಡೆದ ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಕೇಶವ ಪಂಜಾಡಿ ಪಕ್ಷದ ಶಿಸ್ತು ಉಲ್ಲಂಘಿಸಿ, ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವುದು ಈ ಶಿಸ್ತು ಕ್ರಮಕ್ಕೆ ಪ್ರಮುಖ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಮಂಡಲದ ಅಧ್ಯಕ್ಷ ದಿನೇಶ್ ಪುತ್ರನ್ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ. ಪಕ್ಷದ ನಿಯಮಾವಳಿ ಹಾಗೂ ಶಿಸ್ತನ್ನು ಗಾಳಿಗೆ ತೂರಿದ ಕಾರಣ ಕೇಶವ ಪಂಜಾಡಿ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಹೊಣೆಗಾರಿಕೆಗಳಿಂದ ವಜಾಗೊಳಿಸಲಾಗಿದೆ ಎಂದು ದಿನೇಶ್ ಪುತ್ರನ್ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.