ಮೂಡುಬಿದಿರೆ: ಸುವರ್ಣ ಕರ್ನಾಟಕ ರಾಜ್ಯ ಸಮಿತಿ ಜೈ ಭೀಮ್ ಯುವ ಸೇನೆ ವತಿಯಿಂದ ಮೂಡುಬಿದಿರೆ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಯ 200 ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಸ್ಥಳೀಯ ಸಮಾಜ ಮಂದಿರದಲ್ಲಿ ಈ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಜೈ ಭೀಮ್ ಯುವ ಸೇನೆಯ ಪದಾಧಿಕಾರಿಗಳು ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಹಸ್ತಾಂತರಿಸಿದರು. ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಸಾಮಾಜಿಕ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷ ವರ್ತೂರು ಮಂಜುನಾಥ್, ತಾಲೂಕು ಉಪಾಧ್ಯಕ್ಷ ರಂಜಿತ್, ಮುಖ್ಯ ಸಲಹೆಗಾರ ಸಂತೋಷ್ ಕುಮಾರ್ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಶಕುಂತಳಾ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.