ಮೂಡುಬಿದಿರೆ: ಪೇಟೆಯಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ, ಅಕ್ರಮ ವಾಹನ ನಿಲುಗಡೆ ಹಾಗೂ ಸಂಚಾರ ನಿಯಮ ಉಲ್ಲಂಘನೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಮೂಡುಬಿದಿರೆ ಪೊಲೀಸರು ಕಳೆದ 10 ದಿನಗಳಿಂದ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 94 ಪ್ರಕರಣಗಳನ್ನು ದಾಖಲಿಸಿ ₹48 ಸಾವಿರ ದಂಡ ವಸೂಲಿ ಮಾಡಿದ್ದಾರೆ.

ಇತ್ತೀಚೆಗೆ ನಡೆದ ನಮ್ಮ ಮೂಡುಬಿದಿರೆ ಫೋರಂ ಸಭೆಯಲ್ಲಿ ಅಕ್ರಮ ಪಾರ್ಕಿಂಗ್, ಹೆಲ್ಮೆಟ್ ಧರಿಸದೆ ಸಂಚರಿಸುವುದು, ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುವುದು ಸೇರಿದಂತೆ ಹಲವು ಸಂಚಾರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವಿಶೇಷ ತಪಾಸಣೆ ಹಾಗೂ ಜಾಗೃತಿ ಕಾರ್ಯಾಚರಣೆಯನ್ನು ಆರಂಭಿಸಿತ್ತು.

ಫೋರಂ ಸಭೆಯ ದೂರುಗಳಿಗೆ ಪೊಲೀಸರ ಸ್ಪಂದನೆ ಸಾರ್ವಜನಿಕರ ಅಹವಾಲುಗಳ ಬೆನ್ನಲ್ಲೇ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಪೇಟೆ, ಕೃಷ್ಣಕಟ್ಟೆ, ಬಸ್ ನಿಲ್ದಾಣ ಹಾಗೂ ಹೆದ್ದಾರಿ ಸಂಪರ್ಕ ರಸ್ತೆಗಳಲ್ಲಿ ತಪಾಸಣೆ ನಡೆಸಿದರು. ಶಾಲೆ ಹಾಗೂ ಕಚೇರಿ ಸಮಯದಲ್ಲಿ ಹೆಚ್ಚಾಗುವ ವಾಹನ ದಟ್ಟಣೆಯನ್ನು ನಿಯಂತ್ರಿಸಲು ವಿಶೇಷ ಗಮನ ಹರಿಸಲಾಯಿತು.

ಹೆಲ್ಮೆಟ್ ಉಲ್ಲಂಘನೆ ಪ್ರಕರಣಗಳೇ ಹೆಚ್ಚು ಕಾರ್ಯಾಚರಣೆಯಲ್ಲಿ ಹೆಲ್ಮೆಟ್ ಧರಿಸದೆ ಸಂಚರಿಸಿದ್ದ 54 ಪ್ರಕರಣಗಳು ಪತ್ತೆಯಾಗಿದ್ದು, ₹27 ಸಾವಿರ ದಂಡ ವಸೂಲಿ ಮಾಡಲಾಗಿದೆ. ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸಿದ್ದ 14 ಮಂದಿಯಿಂದ ₹7 ಸಾವಿರ ದಂಡ ಸಂಗ್ರಹಿಸಲಾಗಿದೆ.

ಅಕ್ರಮ ಪಾರ್ಕಿಂಗ್ ವಿರುದ್ಧ ಕಟ್ಟುನಿಟ್ಟಿನ ಕ್ರಮ ರಾಷ್ಟ್ರೀಯ ಹೆದ್ದಾರಿ ಬದಿಯ ನೋ-ಪಾರ್ಕಿಂಗ್ ವಲಯದಲ್ಲಿ ವಾಹನ ನಿಲ್ಲಿಸಿದ್ದ 10 ಪ್ರಕರಣಗಳಲ್ಲಿ ₹5 ಸಾವಿರ ಹಾಗೂ ಏಕಮುಖ ರಸ್ತೆಯ ನಿಯಮ ಉಲ್ಲಂಘಿಸಿದ 6 ಪ್ರಕರಣಗಳಲ್ಲಿ ₹3 ಸಾವಿರ ದಂಡ ವಿಧಿಸಲಾಗಿದೆ. ಇತರೆ ಸಂಚಾರ ನಿಯಮ ಉಲ್ಲಂಘನೆಗಳಿಗೂ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗಿದೆ.

ಪೇಟೆಯಲ್ಲಿ ಅಕ್ರಮ ಪಾರ್ಕಿಂಗ್ ಹಾಗೂ ಸಂಚಾರ ನಿಯಮ ಉಲ್ಲಂಘನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿಯೂ ವಿಶೇಷ ತಪಾಸಣೆ ಮತ್ತು ಜಾಗೃತಿ ಕಾರ್ಯಾಚರಣೆ ಮುಂದುವರಿಯಲಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಿಎಸ್‌ಐ ಪ್ರತಿಭಾ ಕೆ.ಸಿ. ತಿಳಿಸಿದ್ದಾರೆ.