ಮೂಡುಬಿದಿರೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಮಂಗಳೂರಿನ ಪಡೀಲ್‌ನ ಬೈರಾಡಿಕೆರೆಯ ವ್ಯಾಪ್ತಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.

ಪರಿಸರ ಪ್ರೇಮಿ ಮಾಧವ ಉಳ್ಳಾಲ ಅವರ ಮಾರ್ಗದರ್ಶನದಲ್ಲಿ ಬೈರಾಡಿಕೆರೆಯ ಸುತ್ತಮುತ್ತ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶ ಸಾರಲಾಯಿತು.

ಬೈರಾಡಿಕೆರೆ ಸಂರಕ್ಷಣಾ ಹಾಗೂ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಣ್ಣಯ್ಯ ಕುಲಾಲ್ ಉಳ್ತೂರು ಮಾತನಾಡಿ , ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಚಿತ್ತರಂಜನ್ ಬೋಳಾರ್ ಅವರ ನೇತೃತ್ವದಲ್ಲಿ ನಿರಂತರವಾಗಿ ಸಾಮಾಜಿಕ ಮತ್ತು ಪರಿಸರ ಸಂಬಂಧಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು. ಬೈರಾಡಿಕೆರೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಂಘವು ಮುಂದಿನ ದಿನಗಳಲ್ಲಿಯೂ ಸಹಭಾಗಿತ್ವ ಮುಂದುವರಿಸಬೇಕೆಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮಾತನಾಡಿ, ಕಳೆದ 14 ವರ್ಷಗಳಿಂದ ಸಂಘವು ವಿಶ್ವ ಪರಿಸರ ದಿನಾಚರಣೆಯನ್ನು ವಿವಿಧ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿದೆ ಎಂದರು. ಪಡೀಲ್ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್‌ಗಳಲ್ಲಿ ಹಾಗೂ ವಿವಿಧ ಪ್ರದೇಶಗಳಲ್ಲಿ ಸಸಿ ನೆಡುವ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಸಂಘದ ಪ್ರಧಾನ ಕಚೇರಿ ಆವರಣದಲ್ಲಿಯೂ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಈ ವರ್ಷದ ಪರಿಸರ ದಿನಾಚರಣೆಯನ್ನು ಬೈರಾಡಿಕೆರೆ ಸಂರಕ್ಷಣಾ ಮತ್ತು ಅಭಿವೃದ್ಧಿ ಸಮಿತಿ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದು, ಮುಂದಿನ ದಿನಗಳಲ್ಲಿ ಬೈರಾಡಿಕೆರೆಯ ಸ್ವಚ್ಛತೆ ಮತ್ತು ಸಂರಕ್ಷಣೆಗೆ ನಿರಂತರ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಸಂಘದ ನಿರ್ದೇಶಕ ಗೋಪಾಲ್ ಎಂ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಮಂಗಳೂರು ಮಹಾನಗರ ಪಾಲಿಕೆಯ ಪರಿಸರ ವಿಭಾಗದ ಇಂಜಿನಿಯರ್ ದಯಾನಂದ ಪೂಜಾರಿ, ಸಯ್ಯದ್, ಬೈರಾಡಿಕೆರೆ ಸಂರಕ್ಷಣಾ ಹಾಗೂ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳಾದ ಅನಿಲ್ ಕೆಂಬಾರ್, ಸಂತೋಷ್ ಶೆಟ್ಟಿ, ಸುರೇಶ್ ಆಚಾರ್, ವಿಕ್ಕಿ ಪೂಜಾರಿ, ಮಡಿಲು ಸೇವಾ ತಂಡ ಪಡೀಲ್‌ನ ಗೌರವಾಧ್ಯಕ್ಷೆ ಪುಷ್ಪಲತಾ, ಅಧ್ಯಕ್ಷ ಗಜೇಂದ್ರ, ಕರ್ನಾಟಕ ಟೈಲರ್ ಅಸೋಸಿಯೇಷನ್ ರಾಜ್ಯ ಸಮಿತಿಯ ಕೋಶಾಧಿಕಾರಿ ಪ್ರಜ್ವಲ್ ಕುಮಾರ್, ಮಂಗಳೂರು ಸಮಿತಿಯ ಅಧ್ಯಕ್ಷ ಹರೀಶ್ ರೈ, ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಿಬ್ಬಂದಿ ಉಪಸ್ಥಿತರಿದ್ದರು.