ಮೂಡುಬಿದಿರೆ: ಎಂ.ಜೆ. ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೋ ಸಂಸ್ಥಾಪಕ ಅನೀಶ್ ಅವರಿಗೆ ಬೆಂಗಳೂರಿನಲ್ಲಿ ನಡೆದ ಚಿತ್ರಸಂತೆ ಕರ್ನಾಟಕ ಅಚೀವರ್ಸ್ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಸಮಾರಂಭ-2026ರಲ್ಲಿ "ಮೋಸ್ಟ್ ವರ್ಸಟೈಲ್ ಕೊರಿಯೋಗ್ರಾಫರ್ ಅವಾರ್ಡ್" (ಬಹುಮುಖ ನೃತ್ಯ ಸಂಯೋಜಕ ಪ್ರಶಸ್ತಿ) ನೀಡಿ ಗೌರವಿಸಲಾಯಿತು.

ಅನೀಶ್ ಅವರು ಏಳು ನೃತ್ಯ ಶಾಖೆಗಳನ್ನು ಮುನ್ನಡೆಸುತ್ತಿದ್ದು, ನೃತ್ಯ ಕ್ಷೇತ್ರದಲ್ಲಿ ವಿಶಿಷ್ಟ ಗುರುತನ್ನು ನಿರ್ಮಿಸಿದ್ದಾರೆ. ಬಾಲಿವುಡ್, ಹಿಪ್-ಹಾಪ್, ಸೆಮಿ ಕ್ಲಾಸಿಕಲ್, ಫೋಕ್ ಹಾಗೂ ಫ್ರೀಸ್ಟೈಲ್ ಸೇರಿದಂತೆ ವಿವಿಧ ನೃತ್ಯ ಪ್ರಕಾರಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ.

ನೃತ್ಯದ ಮೇಲಿನ ಆಸಕ್ತಿ, ಪರಿಶ್ರಮ ಮತ್ತು ಸೃಜನಶೀಲತೆಯ ಮೂಲಕ ಅನೀಶ್ ಅನೇಕ ವೇದಿಕೆ ಕಾರ್ಯಕ್ರಮಗಳು, ಸಾಂಸ್ಕೃತಿಕ ಉತ್ಸವಗಳು, ಸ್ಪರ್ಧೆಗಳು ಹಾಗೂ ಕಾರ್ಪೊರೇಟ್ ಕಾರ್ಯಕ್ರಮಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಹಲವು ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ನೃತ್ಯವನ್ನು ಕೇವಲ ಕಲೆಯಾಗಿ ಮಾತ್ರವಲ್ಲದೆ ವ್ಯಕ್ತಿತ್ವ ವಿಕಸನದ ಸಾಧನವಾಗಿಯೂ ಪರಿಗಣಿಸುವ ಅನೀಶ್, ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಕಲಾ ಸೇವೆ ಮತ್ತು ಸಾಧನೆಗಾಗಿ ಹಲವು ಪ್ರಶಸ್ತಿ ಹಾಗೂ ಸನ್ಮಾನಗಳು ದೊರೆತಿವೆ.