ಮೂಡುಬಿದಿರೆ: ತೆಂಕಮಿಜಾರು ಗ್ರಾಮದ ಬಂಗೇರಪದವು ಪ್ರದೇಶದಲ್ಲಿನ ಕಲ್ಲು ಕ್ವಾರಿ ಚಟುವಟಿಕೆಗಳಿಗೆ ಸಂಬಂಧಿಸಿದ ಉಲ್ಲಂಘನೆ ಆರೋಪಗಳನ್ನು ಪರಿಶೀಲಿಸಿ, ಸ್ಥಳ ಪರಿಶೀಲನೆ ನಡೆಸಿ ಎಂಟು ವಾರಗಳೊಳಗೆ ಕಾನೂನುಬದ್ಧ ನಿರ್ಧಾರ ಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ನಿರ್ದೇಶನ ನೀಡಿದೆ.

ಸರ್ವೆ ಸಂಖ್ಯೆ 154/2 ಹಾಗೂ 154/3ಬಿ ಜಾಗದಲ್ಲಿ ರೆಡ್ ಸ್ಟೋನ್ ಟ್ರೇಡಿಂಗ್ ಕಾರ್ಪೊರೇಷನ್‌ಗೆ ನೀಡಿರುವ ಕ್ವಾರಿ ಪರವಾನಗಿಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ಬಂಗೇರಪದವು ನಿವಾಸಿಗಳಾದ ಸುರೇಶ್ ಕುರುಂಬಿಲ, ಸಂದೀಪ್ ಸುವರ್ಣ ಬಾಲಕೃಷ್ಣ, ಜನಾರ್ದನ ಗೌಡ ಶೇಷಪ್ಪ ಗೌಡ, ಜಾಯ್ಸನ್ ಪ್ರವೀಣ್ ಡಿಸೋಜಾ ಜೆರಾಲ್ಡ್ ಡಿಸೋಜಾ, ವಿಶ್ವನಾಥ್ ಶೆಟ್ಟಿ ಚಂದ್ರಪ್ಪ ಶೆಟ್ಟಿ, ಸತೀಶ ಜಯ, ಸತ್ಯನಾರಾಯಣ ಎನ್. ಪುಟ್ಟಣ್ಣ ಪೂಜಾರಿ, ಲೋಕನಾಥ ಸಾಲ್ಯಾನ್ ದೇಜು ಸಾಲ್ಯಾನ್, ಜನಾರ್ದನ ಶೇಷು ಗೌಡ, ಸುಧಾಕರ ವೆಂಕಪ್ಪ ಕೋಟ್ಯಾನ್, ದಿವ್ಯೇಶ್ ಚಂದ್ರಶೇಖರ, ನಾರಾಯಣ ಪೂಜಾರಿ ಆನಂದ ಪೂಜಾರಿ, ಶಿವಕುಮಾರ್ ಶೆಟ್ಟಿ ಮಹಾಬಲ ಎಂ. ಶೆಟ್ಟಿ, ಶಾಲಿನಿ ಕೆ. ಸಾಲ್ಯಾನ್ ಅಣ್ಣು ಪೂಜಾರಿ, ರಾಘವೇಂದ್ರ ರಾವ್ ರಾಮಣ್ಣ ಭಟ್, ಸುಂದರ ಪೂಜಾರಿ ದೇವಪ್ಪ ಪೂಜಾರಿ ಹಾಗೂ ಸಂತೋಷ್ ಕುಮಾರ್ ಸುಂದರ ಪೂಜಾರಿ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಪರವಾಗಿ ಚಿದಾನಂದ ಕೆದಿಲಾಯ ಎಂ. ಅವರ ಸೂಚನೆಯಂತೆ ಗ್ಲಾನಾ ಎಸ್. ಡಿಸೋಜ ವಾದ ಮಂಡಿಸಿದರು. ಕ್ವಾರಿಯಲ್ಲಿ ಪರಿಸರ ನಿಯಮಗಳು, ಪರವಾನಗಿ ಷರತ್ತುಗಳು ಹಾಗೂ ಕರ್ನಾಟಕ ಸಣ್ಣ ಖನಿಜ ರಿಯಾಯಿತಿ ನಿಯಮಗಳು–1994ರ ನಿಯಮ 6(2) ಉಲ್ಲಂಘನೆಯಾಗಿದ್ದು, ಸಾಮಾನ್ಯ ಕಟ್ಟಡ ಕಲ್ಲಿನ ಹೆಸರಿನಲ್ಲಿ ಅಲ್ಯೂಮಿನಿಯಂ ಅಂಶವಿರುವ ಖನಿಜವನ್ನು ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ ಹಾಗೂ ಪವರ್ ಗ್ರಿಡ್ ಮಾರ್ಗದಿಂದ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿರುವ ಆರೋಪವನ್ನೂ ನ್ಯಾಯಾಲಯದ ಗಮನಕ್ಕೆ ತರಲಾಯಿತು.

ಈ ಹಿಂದೆ ತೆಂಕಮಿಜಾರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಲ್ಲಿಸಿದ್ದ ದೂರಿನಲ್ಲಿಯೂ ಅಗತ್ಯ ಕಾನೂನುಬದ್ಧ ಅನುಮೋದನೆಗಳಿಲ್ಲದೆ ಕ್ವಾರಿ ಚಟುವಟಿಕೆಗಳು ನಡೆಯುತ್ತಿರುವುದಾಗಿ ಉಲ್ಲೇಖಿಸಲಾಗಿತ್ತು. ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಿ ಸ್ಥಳಕ್ಕೆ ಭೇಟಿ ನೀಡಿ ವರದಿ ಸಿದ್ಧಪಡಿಸಿ ಕಾನೂನುಬದ್ಧ ನಿರ್ಧಾರ ಕೈಗೊಂಡು, ಅದರ ಪ್ರತಿಯನ್ನು ಅರ್ಜಿದಾರರು ಸೇರಿದಂತೆ ಸಂಬಂಧಪಟ್ಟ ಎಲ್ಲ ಪಕ್ಷಗಳಿಗೆ ಆದೇಶದ ದಿನಾಂಕದಿಂದ ಎಂಟು ವಾರಗಳೊಳಗೆ ಲಿಖಿತ ರೂಪದಲ್ಲಿ ನೀಡುವಂತೆ ಸೂಚಿಸಿ ಹೈಕೋರ್ಟ್ ರಿಟ್ ಅರ್ಜಿಯನ್ನು ವಿಲೇವಾರಿ ಮಾಡಿದೆ.