ಮೂಡುಬಿದಿರೆ: ಹಿಂದೂ ಧರ್ಮ, ದೇವರು ಮತ್ತು ಸಂಸ್ಕೃತಿಯ ಕುರಿತು ಅವಹೇಳನಕಾರಿ ಹಾಗೂ ಅಶ್ಲೀಲ ಪದಗಳನ್ನು ಬಳಸಿರುವ ಪ್ರೊ. ಕೆ.ಎಸ್. ಭಗವಾನ್ ವಿರುದ್ಧ ತಕ್ಷಣ ಮೊಕದ್ದಮೆ ದಾಖಲಿಸಿ ಬಂಧಿಸಬೇಕೆಂದು ಮೂಡುಬಿದಿರೆ ಶ್ರೀ ವೆಂಕಟರಮಣ, ಶ್ರೀ ಹನುಮಂತ ದೇವಸ್ಥಾನದ ಮೊಕ್ತೇಸರ ಪಡುಮಾರ್ನಾಡು ದಯಾನಂದ ಪೈ ಆಗ್ರಹಿಸಿದರು.
ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮೂಡುಬಿದಿರೆ ತಾಲೂಕು ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ರೀತಿಯಲ್ಲಿ ಪ್ರೊ. ಕೆ.ಎಸ್. ಭಗವಾನ್ ನೀಡಿರುವ ಹೇಳಿಕೆಗಳು ಖಂಡನೀಯವಾಗಿದ್ದು, ಈ ಸಂಬಂಧ ಸರ್ಕಾರ ತಕ್ಷಣ ಕಾನೂನು ಕ್ರಮ ಕೈಗೊಂಡು ಬಂಧಿಸಬೇಕೆಂದು ಒತ್ತಾಯಿಸಿದರು. ಈ ವಿಚಾರದಲ್ಲಿ ಸರ್ಕಾರ ವಿಳಂಬ ಮಾಡುತ್ತಿರುವುದಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ಬಳಿಕ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾದ ಮನವಿಪತ್ರವನ್ನು ಗಣೇಶ್ ರಾವ್ ವಾಚಿಸಿದರು.
ಈ ಸಂದರ್ಭದಲ್ಲಿ ಜಾಹ್ನವಿ ಉಮೇಶ್ ಪೈ, ನೀತಾ ಪ್ರಭು, ಚಿದಾನಂದ ಎಸ್. ಸಫಲಿಗ, ಅಶೋಕ್ ಮಲ್ಯ, ತನಿಯಪ್ಪ ಕೋಟ್ಯಾನ್, ಪ್ರವೀಣ್ ಭಂಡಾರಿ, ಕಿಶೋರ್ ಭಂಡಾರಿ, ದೇವದಾಸ್ ಕಾಮತ್, ಮುರಳೀಧರ ಕಾಮತ್, ಗೋವಿಂದ ಪ್ರಭು, ಮೋಹನ್ ಪ್ರಭು, ವಾಸ್ತು ತಜ್ಞ ರಾಘವೇಂದ್ರ ಭಂಡಾರ್ಕಾರ್ ಉಪಸ್ಥಿತರಿದ್ದರು.