ಮೂಡುಬಿದಿರೆ: ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ 2026-27ನೇ ಸಾಲಿನ ಯಕ್ಷಶಿಕ್ಷಣ ತರಗತಿಗೆ ಮೂಡುಬಿದಿರೆಯ ಪ್ರೇರಣಾ ಶಾಲೆಯಲ್ಲಿ ಚಾಲನೆ ನೀಡಲಾಯಿತು.
ಅಲಂಗಾರಿನ ಮಹಾಗಣಪತಿ-ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಾಲ್ಯದಲ್ಲಿ ದೊರೆಯದ ಅವಕಾಶ ಇಂದಿನ ಮಕ್ಕಳಿಗೆ ಸಿಕ್ಕಿರುವುದು ಸುವರ್ಣಾವಕಾಶವಾಗಿದ್ದು, ಪುರಾಣಗಳಲ್ಲಿನ ಕಥೆಗಳನ್ನು ಅರಿತರೆ ಸುಸಂಸ್ಕೃತ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಹೇಳಿದರು.
ಯಕ್ಷಶಿಕ್ಷಣದ ಮೂಡುಬಿದಿರೆ-ಕಾರ್ಕಳ ವಲಯದ ಸಂಚಾಲಕ ಮಹಾವೀರ ಪಾಂಡಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಯಕ್ಷಗಾನದ ಆಸಕ್ತಿ ಬೆಳೆಸುವ ಉದ್ದೇಶದಿಂದ ಯಕ್ಷಧ್ರುವ ಪಟ್ಲ ಫೌಂಡೇಶನ್ ಕಾರ್ಯನಿರ್ವಹಿಸುತ್ತಿದ್ದು, 102 ಶಾಲೆಗಳಲ್ಲಿ ಸುಮಾರು 7,500 ವಿದ್ಯಾರ್ಥಿಗಳು 70 ಯಕ್ಷಗುರುಗಳ ಮಾರ್ಗದರ್ಶನದಲ್ಲಿ ಯಕ್ಷಶಿಕ್ಷಣ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ ಎಂ. ಶಾಂತಾರಾಮ ಕುಡ್ವ ಮಾತನಾಡಿ, ಕರಾವಳಿಯ ಮಣ್ಣಿನ ಕಲೆಯಾದ ಯಕ್ಷಗಾನ ಮುಂದಿನ ಪೀಳಿಗೆಗೂ ಉಳಿಯಬೇಕೆಂಬ ದೂರದೃಷ್ಟಿಯಿಂದ ಪಟ್ಲ ಫೌಂಡೇಶನ್ ನಡೆಸುತ್ತಿರುವ ಯಕ್ಷಶಿಕ್ಷಣ ಕಾರ್ಯಕ್ರಮ ಸ್ವಾಗತಾರ್ಹ ಎಂದು ಹೇಳಿದರು.
ಪಟ್ಲ ಫೌಂಡೇಶನ್‌ನ ಮೂಡುಬಿದಿರೆ ಘಟಕದ ಸಂಚಾಲಕ ಲಾಡಿ ರವಿಪ್ರಸಾದ್ ಶೆಟ್ಟಿ ಹಾಗೂ ಜೊತೆ ಕಾರ್ಯದರ್ಶಿ ನೆಲ್ಲಿಮಾರ್ ಸದಾಶಿವ ಭಟ್ ಮಾತನಾಡಿದರು. ಘಟಕದ ಅಧ್ಯಕ್ಷ ದಿವಾಕರ ಶೆಟ್ಟಿ ಖಂಡಿಗ, ಕಾರ್ಯದರ್ಶಿ ಅರುಣ್ ಕುಮಾರ್, ಸೇವಾಂಜಲಿ ಶಿಕ್ಷಣ ಸಂಸ್ಥೆಯ ಕೋಶಾಧಿಕಾರಿ ಎಸ್.ಎನ್. ಬೋರ್ಕರ್ ಹಾಗೂ ಯಕ್ಷಗುರು ಪ್ರಥ್ವೀಶ್ ಪರ್ಕಳ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ವತ್ಸಲಾ ರಾಜೇಶ್ ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕಿ ಗ್ರೀಷ್ಮಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪ್ರಿಯಾ ವಂದಿಸಿದರು. ಬಳಿಕ ದಿವಾಕರ ಶೆಟ್ಟಿ ಖಂಡಿಗ ಹಾಗೂ ಎಂ. ಶಾಂತಾರಾಮ ಕುಡ್ವ ಸಂಪ್ರದಾಯದಂತೆ ಯಕ್ಷಗುರು ಪ್ರಥ್ವೀಶ್ ಪರ್ಕಳ ಅವರಿಗೆ ವೀಳ್ಯ ನೀಡಿ ಯಕ್ಷಶಿಕ್ಷಣ ತರಗತಿ ಆರಂಭಿಸಲು ಆಹ್ವಾನಿಸಿದರು.