ಮೂಡುಬಿದಿರೆ:ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಪುತ್ತಿಗೆ ಗ್ರಾಮ ಪಂಚಾಯಿತಿ ಮಾದರಿ ಸೋಲಾರ್ ಗ್ರಾಮವಾಗಿ ಆಯ್ಕೆಯಾಗಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾದರಿ ಸೋಲಾರ್ ಗ್ರಾಮವನ್ನು ಆಯ್ಕೆ ಮಾಡುವ ಉದ್ದೇಶದಿಂದ ಜಿಲ್ಲಾ ಮಟ್ಟದ ಸಮಿತಿ 13 ಗ್ರಾಮಗಳನ್ನು ಆಯ್ಕೆ ಮಾಡಿತ್ತು. ಈ ಗ್ರಾಮಗಳ ಪೈಕಿ 2025ರ ಡಿಸೆಂಬರ್ 31ರವರೆಗೆ ಅಳವಡಿಸಲಾದ ಸೋಲಾರ್ ಘಟಕಗಳ ಸಾಮರ್ಥ್ಯ ಅತ್ಯಧಿಕವಾಗಿದ್ದ ಹಿನ್ನೆಲೆಯಲ್ಲಿ ಪುತ್ತಿಗೆ ಗ್ರಾಮ ಪಂಚಾಯಿತಿಯನ್ನು ಮಾದರಿ ಸೋಲಾರ್ ಗ್ರಾಮವಾಗಿ ಪರಿಗಣಿಸಲಾಗಿದೆ.
2026ರ ಫೆಬ್ರವರಿ 19ರಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪುತ್ತಿಗೆ ಗ್ರಾಮ ಪಂಚಾಯಿತಿಯನ್ನು ಅಧಿಕೃತವಾಗಿ ಮಾದರಿ ಸೋಲಾರ್ ಗ್ರಾಮವಾಗಿ ಆಯ್ಕೆ ಮಾಡಲಾಗಿದೆ.
ಮಾದರಿ ಸೋಲಾರ್ ಗ್ರಾಮದ ಅಭಿವೃದ್ಧಿಗಾಗಿ ನವ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆ ಅನುಷ್ಠಾನಗೊಳಿಸುವ ಸಂಸ್ಥೆಗೆ ₹1 ಕೋಟಿ ಸಹಾಯಧನ ನೀಡಲಿದೆ. ಇದೇ ಯೋಜನೆಯಡಿ ಉಡುಪಿ ಜಿಲ್ಲೆಯ ಕೋಟತಟ್ಟು ಗ್ರಾಮ ಪಂಚಾಯಿತಿಯೂ ಮಾದರಿ ಸೋಲಾರ್ ಗ್ರಾಮವಾಗಿ ಆಯ್ಕೆಯಾಗಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.