ಮೂಡುಬಿದಿರೆ: ಸ್ತ್ರೀ ಪರಿಪೂರ್ಣತೆಯ ಸಂಕೇತವಾಗಿದ್ದು, ಆಕೆಯ ಅಂತರಂಗದ ಶಕ್ತಿ, ಸಂವೇದನೆ ಮತ್ತು ಚಿಂತನೆ ಅಕ್ಷರ ರೂಪದಲ್ಲಿ ಅಭಿವ್ಯಕ್ತಿಯಾದಾಗ ಸಮಾಜದ ಮೌಲ್ಯಗಳನ್ನು ಶ್ರೀಮಂತಗೊಳಿಸುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಳ್ವಾಸ್‌ನ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೌಮ್ಯ ತಿಲಕ್ ಶೆಟ್ಟಿಯ 'ಮಸಿಯ ಮಾತು' ಕವನ ಸಂಕಲನವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಮೂಡುಬಿದಿರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಕೃತಿ ಪರಿಚಯಿಸಿ, ಇಂಗ್ಲಿಷ್ ಶಿಕ್ಷಕಿಯಾಗಿದ್ದರೂ ಕನ್ನಡ ಸಾಹಿತ್ಯದ ಬಗ್ಗೆ ಸೌಮ್ಯ ತಿಲಕ್ ಶೆಟ್ಟಿ ತೋರಿರುವ ಬದ್ಧತೆ ಶ್ಲಾಘನೀಯವಾಗಿದೆ ಎಂದರು.
ಸೌಮ್ಯ ತಿಲಕ್ ಶೆಟ್ಟಿ ಮಾತನಾಡಿ, ಈ ಕೃತಿಯಲ್ಲಿರುವ ನೂರು ಕವನಗಳು ಬದುಕಿನ ಅನುಭವ, ಆತ್ಮಸಂವಾದ ಮತ್ತು ಸಮಾಜವನ್ನು ನೋಡುವ ದೃಷ್ಟಿಕೋನದ ಪ್ರತಿಬಿಂಬವಾಗಿವೆ. ಓದುಗರ ಪ್ರೋತ್ಸಾಹ ಮತ್ತಷ್ಟು ಬರೆಯುವ ಉತ್ಸಾಹ ನೀಡಿದೆ ಎಂದರು. ಎಕ್ಸಲೆಂಟ್ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಬಿ. ಪಿ. ಸಂಪತ್ ಕುಮಾರ್, ಬರಹಗಾರ್ತಿ ಆಶಾ ಅಡೂರು, ಆಮಂತ್ರಣ ಸೇವಾ ಪ್ರತಿಷ್ಠಾನದ ಟ್ರಸ್ಟಿ ವಿಜಯಕುಮಾರ್ ಜೈನ್ ಉಪಸ್ಥಿತರಿದ್ದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಸುಧಾರಾಣಿ ಕಾರ್ಯಕ್ರಮ ನಿರೂಪಿಸಿದರು.