ಮಂಗಳೂರು : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಉಳ್ಳಾಲ ಶಾಖೆಯ 11ನೇ ವಾರ್ಷಿಕೋತ್ಸವದ ಅಂಗವಾಗಿ 111ನೇ ಉಚಿತ ವೈದ್ಯಕೀಯ, ನೇತ್ರ ತಪಾಸಣಾ ಹಾಗೂ ದಂತ ಚಿಕಿತ್ಸಾ ಶಿಬಿರವು ಜೂನ್ 28ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ಉಳ್ಳಾಲ ನಗರಸಭೆ ಆವರಣದ ಸಮುದಾಯ ಭವನದಲ್ಲಿ ನಡೆಯಲಿದೆ.
ಶಿಬಿರದಲ್ಲಿ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್, ಮಂಗಳೂರು ತಜ್ಞ ವೈದ್ಯರ ತಂಡದಿಂದ ದಂತ ತಪಾಸಣೆ, ಸಲಹೆ, ಹಲ್ಲು ಕೀಳುವುದು, ಹುಳುಕು ಹಲ್ಲು ಭರ್ತಿ ಮಾಡುವುದು ಹಾಗೂ ಹಲ್ಲುಗಳನ್ನು ಸ್ವಚ್ಛಗೊಳಿಸುವ ಸೇವೆ ಲಭ್ಯವಾಗಲಿದೆ. ಕಣಚೂರು ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ನಾಟೆಕಲ್, ಮಂಗಳೂರು ತಜ್ಞ ವೈದ್ಯರ ತಂಡದಿಂದ ಕಣ್ಣಿನ ತಪಾಸಣೆ, ಅಗತ್ಯವಿರುವವರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ, ಸಾಮಾನ್ಯ ವೈದ್ಯಕೀಯ ಸಮಾಲೋಚನೆ, ಕಿವಿ, ಮೂಗು ಮತ್ತು ಗಂಟಲು ತಪಾಸಣೆ, ಹೆಚ್ಚಿನ ಚಿಕಿತ್ಸೆಗೆ ಹಸಿರು ಕಾರ್ಡ್ ವಿತರಣೆ ಸೇರಿದಂತೆ ವಿವಿಧ ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುವುದು. ಅಗತ್ಯವಿರುವವರಿಗೆ ಉಚಿತ ಕನ್ನಡಕವೂ ವಿತರಿಸಲಾಗುವುದು.
ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ ಪಡೀಲ್, ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಮತ್ತು ಮಹಿಳಾ ವಿಭಾಗ ಬಂಡಿಕೊಟ್ಯ, ವಿದ್ಯಾರಣ್ಯ ಯುವಕ ವೃಂದ, ವಿದ್ಯಾರಣ್ಯ ಕಲಾವೃಂದ ಉಳ್ಳಾಲ, ಶಿವಶಕ್ತಿ ಯುವಕ ಮಂಡಲ ಉಳ್ಳಾಲ ಹಾಗೂ ಉಳ್ಳಾಲ ತಾಲೂಕು ಮಹಿಳಾ ಮಂಡಳಗಳ ಒಕ್ಕೂಟದ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿದೆ.
ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆಯುವಂತೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.