ಮೂಡುಬಿದಿರೆ: ಕಲ್ಲಬೆಟ್ಟುವಿನ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾದ 'ಎಕ್ಸಲೆಂಟ್ ಸಂಸ್ಕೃತಿ ಸಂಭ್ರಮ-2026' ಪ್ರತಿಭೋತ್ಸವದ ಅಂಗವಾಗಿ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಡೆಯಿತು.

ಖ್ಯಾತ ಯಕ್ಷಗಾನ ಕಲಾವಿದ ಹಾಗೂ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ದೀಪ ಬೆಳಗಿಸಿ, ಸಾಂಸ್ಕೃತಿಕ ತೇರನ್ನು ಎಳೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ, ಯಕ್ಷಗಾನವನ್ನು ವಿಶ್ವಮಟ್ಟದಲ್ಲಿ ಪರಿಚಯಿಸುವಲ್ಲಿ ಪಟ್ಲ ಸತೀಶ್ ಶೆಟ್ಟಿ ಅವರ ಕೊಡುಗೆ ಗಮನಾರ್ಹವಾಗಿದೆ. ಕಲೆ ಸಮಾಜವನ್ನು ಜಾಗೃತಗೊಳಿಸುವ ಶಕ್ತಿಯಾಗಿದ್ದು, ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಟ್ಲ ಸತೀಶ್ ಶೆಟ್ಟಿ, ಶಿಕ್ಷಣದೊಂದಿಗೆ ಸಂಸ್ಕೃತಿ, ಸಂಸ್ಕಾರ ಮತ್ತು ಉತ್ತಮ ಪರಿಸರ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಜೀವನವನ್ನು ಸಮಾಜದ, ವಿಶೇಷವಾಗಿ ಬಡವರು ಹಾಗೂ ನೊಂದವರ ಸೇವೆಗೆ ಮೀಸಲಿಡಬೇಕು. ತಂದೆ-ತಾಯಿ ಹಾಗೂ ಗುರುಗಳಿಗೆ ಸದಾ ಋಣಿಯಾಗಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಬಳಿಕ 'ಯಕ್ಷಗಾನಂ ವಿಶ್ವಗಾನಂ' ಘೋಷಣೆಯೊಂದಿಗೆ ಯಕ್ಷಗಾನ ಗಾನಸುಧೆ ಹರಿಸಿ ಸಭಿಕರ ಮೆಚ್ಚುಗೆ ಗಳಿಸಿದರು.

ಇದೇ ವೇಳೆ ಸಂಸ್ಥೆಯ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ಕಲಾವಿದ ಮಹವೀರ ಪಾಂಡಿ ಮಾತನಾಡಿ, ಅವಕಾಶವನ್ನು ಗುರುತಿಸಿ ಶ್ರಮದಿಂದಸದುಪಯೋಗಪಡಿಸಿಕೊಳ್ಳುವವರಿಗೆ ದೇವರ ಆಶೀರ್ವಾದ ಸದಾ ಜೊತೆಯಾಗಿರುತ್ತದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, ಯಕ್ಷಗಾನದ ಮೂಲಕ ಕರಾವಳಿಯ ಕೀರ್ತಿಯನ್ನು ವಿಶ್ವದಾದ್ಯಂತ ಪಸರಿಸಿದ ಪಟ್ಲ ಸತೀಶ್ ಶೆಟ್ಟಿ ಅವರ ಸಾಧನೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಎಂದರು.

ಆಡಳಿತ ನಿರ್ದೇಶಕ ಡಾ. ಸಂಪತ್ ಕುಮಾರ್ ಜೈನ್, ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್, ಸಿಬಿಎಸ್‌ಇ ಪ್ರಾಂಶುಪಾಲ ಶ್ರೀಪ್ರಸಾದ್, ಕೀಬೋರ್ಡ್ ಪರಿಣಿತ ಸದಾಶಿವ ಭಟ್ ಶಿವಗಿರಿ, ತಬಲಾ ಪರಿಣಿತ ಗೌರಿಪ್ರಸಾದ್ ಗುರುವಾಯನಕೆರೆ, ಭರತನಾಟ್ಯ ಕಲಾವಿದೆ ರಶ್ಮಿತಾ ಅರವಿಂದ್, ಕರಾಟೆ ತರಬೇತುದಾರ ಸರ್ಫರಾಜ್ ಎ.ಕೆ., ಚಿತ್ರಕಲೆ ಶಿಕ್ಷಕ ಭಾಸ್ಕರ ನೆಲ್ಯಾಡಿ, ಕೊಳಲು ವಾದಕ ಲೋಕೇಶ್ ಸಂಪಿಗೆ, ಚೆಂಡೆ ವಾದಕ ಚಂದ್ರಶೇಖರ ಆಚಾರ್, ಪಾಶ್ಚಾತ್ಯ ನೃತ್ಯ ತರಬೇತುದಾರ ರೂಪೇಶ್ ಕುಮಾರ್ ಹಾಗೂ ಕರಕುಶಲ ಕಲೆ ಶಿಕ್ಷಕಿ ಚೇತನಾ ಶೆಟ್ಟಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಹರ್ಷಿತಾ ಸ್ವಾಗತಿಸಿದರು. ಮೌಲ್ಯ ವೈ.ಆರ್. ಜೈನ್ ಪಟ್ಲ ಸತೀಶ್ ಶೆಟ್ಟಿ ಅವರ ಪರಿಚಯ ಮಾಡಿಕೊಟ್ಟರು. ವಿಜೇತ ಹಾಗೂ ಶರ್ಮಿತಾ ಕಾರ್ಯಕ್ರಮ ನಿರೂಪಿಸಿದರು. ವನಿತಾ ವಂದಿಸಿದರು.