ಮೂಡುಬಿದಿರೆ: ಸಮಯಪ್ರಜ್ಞೆ, ನಿಸ್ವಾರ್ಥ ಸೇವೆ ಹಾಗೂ ಪರೋಪಕಾರದಂತಹ ಮೌಲ್ಯಗಳನ್ನು ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌) ಸ್ವಯಂಸೇವಕರು ತಮ್ಮ ಜೀವನದ ಆದರ್ಶಗಳನ್ನಾಗಿ ರೂಪಿಸಿಕೊಳ್ಳಬೇಕು ಎಂದು ಪಾರಾದೀಪ್ ಫಾಸ್ಫೇಟ್ಸ್ ಲಿಮಿಟೆಡ್‌ನ ಜಂಟಿ ಪ್ರಧಾನ ವ್ಯವಸ್ಥಾಪಕ (ಮಾರುಕಟ್ಟೆ ಅಭಿವೃದ್ಧಿ ವಿಭಾಗ) ಕೆ.ಬಿ. ಕೀರ್ತನ್ ಕುಮಾರ್ ಹೇಳಿದರು.

ಆಳ್ವಾಸ್ ಪದವಿಪೂರ್ವ ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ನಡೆದ 2026–27ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಷ್ಟ್ರೀಯ ಸೇವಾ ಯೋಜನೆ ಕೇವಲ ಸೇವಾ ಸಂಘಟನೆಯಲ್ಲ; ಉತ್ತಮ ವ್ಯಕ್ತಿತ್ವ, ನಾಯಕತ್ವ, ಸಾಮಾಜಿಕ ಬದ್ಧತೆ ಮತ್ತು ರಾಷ್ಟ್ರಪ್ರೇಮವನ್ನು ಬೆಳೆಸುವ ಜೀವನ ಶಾಲೆಯಾಗಿದೆ ಎಂದರು. ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿಗಳು ಎನ್‌ಎಸ್‌ಎಸ್‌ನಂತಹ ಸೇವಾ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಎನ್‌ಎಸ್‌ಎಸ್‌ನ ಧ್ಯೇಯವಾಕ್ಯವಾದ "ನನಗಲ್ಲ, ನಿನಗೆ" ಎಂಬ ಸಂದೇಶವೇ ಸೇವಾ ಜೀವನದ ಶ್ರೇಷ್ಠ ತತ್ವವಾಗಿದೆ. "ಶ್ರಮ ಮೇವ ಜಯತೇ" ಎಂಬ ವೇದವಾಕ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ. ವಿಶ್ವದಲ್ಲೇ ಅತಿ ದೊಡ್ಡ ಯುವಶಕ್ತಿಯನ್ನು ಹೊಂದಿರುವ ಭಾರತ, ಆ ಶಕ್ತಿಯನ್ನು ರಾಷ್ಟ್ರ ನಿರ್ಮಾಣಕ್ಕೆ ಸದುಪಯೋಗಪಡಿಸಿಕೊಳ್ಳಬೇಕಾದ ಮಹತ್ತರ ಜವಾಬ್ದಾರಿಯನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರ ದೂರದೃಷ್ಟಿ, ಶಿಸ್ತು ಹಾಗೂ ಸಮಾಜಮುಖಿ ನಾಯಕತ್ವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಉತ್ತಮ ನಾಯಕತ್ವದ ಜೀವಂತ ಮಾದರಿಯಾಗಿದೆ ಎಂದು ಪ್ರಶಂಸಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಸದಾಕತ್ ಮಾತನಾಡಿ, ಶಿಕ್ಷಣವೆಂದರೆ ಕೇವಲ ಪಠ್ಯಪುಸ್ತಕದ ಜ್ಞಾನವಲ್ಲ; ಮಾನವೀಯತೆ, ಸೇವಾ ಮನೋಭಾವ ಹಾಗೂ ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ಪ್ರಕ್ರಿಯೆಯಾಗಿದೆ ಎಂದರು.

ಸಂಸ್ಕೃತ ವಿಭಾಗದ ಮುಖ್ಯಸ್ಥ ಅಂಬರೀಶ್ ಚಿಪ್ಳೂಣಕರ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಮೇಘನಾ ಉಪಸ್ಥಿತರಿದ್ದರು.

ಸಂಖ್ಯಾಶಾಸ್ತ್ರ ವಿಭಾಗದ ಉಪನ್ಯಾಸಕಿ ಶಾಲೆಟ್ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಮೇಘನಾ ಸ್ವಾಗತಿಸಿದರು. ಹಿಂದಿ ವಿಭಾಗದ ಉಪನ್ಯಾಸಕಿ ಡಾ. ರೂಪ ಭಟ್ ವಂದಿಸಿದರು.