ಮೂಡುಬಿದಿರೆ: ಬೆಂಗಳೂರು ನಗರದ ಅಭಿವೃದ್ಧಿಗೆ ದೂರದೃಷ್ಟಿಯೊಂದಿಗೆ ಅಡಿಗಲ್ಲು ಹಾಕಿದ ನಾಡಪ್ರಭು ಕೆಂಪೇಗೌಡರ ಆದರ್ಶಗಳು ಇಂದಿಗೂ ಎಲ್ಲರಿಗೂ ಮಾದರಿಯಾಗಿವೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಮೂಡುಬಿದಿರೆ ಆಡಳಿತ ಸೌಧದಲ್ಲಿ ಶನಿವಾರ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ಕೆಂಪೇಗೌಡರು ಕೆರೆಗಳು, ರಸ್ತೆಗಳು, ಪೇಟೆಗಳು ಹಾಗೂ ಗಿಡ-ಮರಗಳ ಅಭಿವೃದ್ಧಿಗೆ ನೀಡಿದ ಆದ್ಯತೆ ಇಂದಿನ ಅಭಿವೃದ್ಧಿಗೂ ದಾರಿದೀಪವಾಗಿದೆ ಎಂದು ಹೇಳಿದರು.

ತಹಸೀಲ್ದಾರ್ ಪುಟ್ಟರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಆಧುನಿಕ ಬೆಂಗಳೂರಿನ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ ನಾಡಪ್ರಭು ಕೆಂಪೇಗೌಡರ ಜನ್ಮದಿನವನ್ನು ರಾಜ್ಯಾದ್ಯಂತ ಆಚರಿಸಲಾಗುತ್ತಿದ್ದು, ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ತಿಳಿಸಿದರು.

ಕೆಂಪೇಗೌಡ ಜಯಂತಿ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ಅಕ್ಷತಾ ಉಪಸ್ಥಿತರಿದ್ದರು.

ಗ್ರಾಮಕರಣಿಕ ಅಜು೯ನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.