ಮೂಡುಬಿದಿರೆ: ಸಪಳಿಗ ಯಾನೆ ಗಾಣಿಗರ ಸೇವಾ ಸಂಘದ 41ನೇ ವರ್ಷದ ವಾರ್ಷಿಕ ಮಹಾಸಭೆ, ಗಾಣಿಗರ ಮಹಿಳಾ ವೇದಿಕೆ ಹಾಗೂ ಯುವ ವೇದಿಕೆಯ ಸಹಯೋಗದಲ್ಲಿ ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ, ಗೌರವಾನ್ವಿತ ಸತ್ಯನಾರಾಯಣ ಪೂಜೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಆಳ್ವಾಸ್ ಎಜುಕೇಶನ್ ಫೌಂಡೇಶನ್ ಟ್ರಸ್ಟಿ ವಿವೇಕ್ ಆಳ್ವ ಉದ್ಘಾಟಿಸಿ ಮಾತನಾಡಿ, ಜಗತ್ತು ವೇಗವಾಗಿ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಯುವಜನರನ್ನು ಅಂಕ ಗಳಿಕೆಗೆ ಮಾತ್ರ ಸೀಮಿತಗೊಳಿಸದೆ ಕೌಶಲಾಭಿವೃದ್ಧಿ ಹೆಚ್ಚಿಸುವ ಚಟುವಟಿಕೆಗಳಲ್ಲಿ ತೊಡಗಿಸಬೇಕು ಎಂದು ಹೇಳಿದರು. ಗಾಣಿಗ ಸಮುದಾಯದವರು ಹಿಂದೆ ಎಣ್ಣೆ ತೆಗೆಯುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಉದ್ಯಮಿ ಸಂದೀಪ್ ಪುತ್ತಿಗೆ ಸಂಘದ ಶೈಕ್ಷಣಿಕ ಚಟುವಟಿಕೆಗಳಿಗೆ 3 ಲಕ್ಷ ರೂ. ದೇಣಿಗೆ ಹಸ್ತಾಂತರಿಸಿದರು. ಸದಾನಂದ ಸಪಳಿಗ ಸಂಘದ ಕಟ್ಟಡ ನಿರ್ಮಾಣಕ್ಕಾಗಿ 1 ಲಕ್ಷ ರೂ. ದೇಣಿಗೆ ನೀಡಿದರು.

ಸಂಘದ ಅಧ್ಯಕ್ಷ ರಾಜೇಶ್ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಗಾಣಿಗ ಸಂಘ ಪುತ್ತೂರಿನ ಅಧ್ಯಕ್ಷ ಲಕ್ಷ್ಮೀ ಪ್ರಸಾದ್ ಬೆಟ್ಟ, ಗಾಣಿಗ ಯುವ ವೇದಿಕೆಯ ಅಧ್ಯಕ್ಷ ಸುಕೇಶ್ ಬಾರಾಡಿ, ಮಹಿಳಾ ವೇದಿಕೆಯ ಅಧ್ಯಕ್ಷೆ ಸುಜಯ ಬಂಗೇರ ಹಾಗೂ ವಿದ್ಯಾರ್ಥಿ ವೇದಿಕೆಯ ಅಧ್ಯಕ್ಷ ರಾಜ್ ಬಂಗೇರ ಉಪಸ್ಥಿತರಿದ್ದರು.

ಸಮಾಜದ ಹಿರಿಯರಾದ ಸದಾನಂದ ಸಪಳಿಗ ನ್ಯಾಯ ಬಸದಿ ಮತ್ತು ವೆಂಕಮ್ಮ ಪಡ್ಡಂದಡ್ಕ ಅವರನ್ನು ಸನ್ಮಾನಿಸಲಾಯಿತು. ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ಅವರನ್ನು ಗೌರವಿಸಲಾಯಿತು.

ದಿ. ಸಾಧು ಪುತ್ರನ್, ದಿ. ಜಾರಪ್ಪ ಮೇಸ್ತ್ರಿ, ದಿ. ಸುಂದರಿ ಜಾರಪ್ಪ ಹಾಗೂ ದಿ. ಬಾಬು ಸಪಳಿಗ ಅವರ ಸ್ಮರಣಾರ್ಥ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

ಕಾರ್ಯದರ್ಶಿ ಪ್ರತಾಪ್ ಬೆಟ್ಕೇರಿ ವಾರ್ಷಿಕ ವರದಿ ಮಂಡಿಸಿದರು. ರಾಜೇಶ್ ಬಂಗೇರ ಸ್ವಾಗತಿಸಿದರು. ಮಹಿಳಾ ವೇದಿಕೆಯ ಕಾರ್ಯದರ್ಶಿ ಸಾರಿಕ ರಾಜೇಶ್ ಬಂಗೇರ ಲೆಕ್ಕಪತ್ರ ಮಂಡಿಸಿದರು. ಜೊತೆ ಕಾರ್ಯದರ್ಶಿ ನಳಿನಿ ಲಕ್ಷ್ಮಣ್ ವರದಿ ಮಂಡಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ರೂಪಾ ಪ್ರದೀಪ್ ಹಾಗೂ ರಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಭವಾನಿ ಶಂಕರ್ ಹಾಗೂ ಸಂಧ್ಯಾ ಸಂದೀಪ್ ಸನ್ಮಾನಿತರನ್ನು ಪರಿಚಯಿಸಿದರು. ದಿಯಾ ಬಂಗೇರ ವಿದ್ಯಾರ್ಥಿಗಳ ವಿವರ ನೀಡಿದರು. ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ನವೀನ್ ಪುತ್ರನ್ ಪುಸ್ತಕ ವಿತರಣೆಯ ವಿವರ ನೀಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರತಾಪ್ ವಂದಿಸಿದರು.