ಮೂಡುಬಿದಿರೆ: ಜಮೀಯ್ಯತುಲ್ ಫಲಾಹ್ ಮೂಡುಬಿದಿರೆ ತಾಲೂಕು ಘಟಕ, ನಮ್ಮ ನಾಡ ಒಕ್ಕೂಟ (ಎನ್‌ಎನ್‌ಒ) ಮೂಡುಬಿದಿರೆ ಘಟಕ, ಎನ್‌ಎನ್‌ಒ ಸಮುದಾಯ ಕೇಂದ್ರ ಹಾಗೂ ಸೌಹಾರ್ದ ಮೂಡುಬಿದಿರೆ ಸಂಯುಕ್ತ ಆಶ್ರಯದಲ್ಲಿ ಎಸ್‌ಐಆರ್-2026 ವಿಶೇಷ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಕುರಿತು ಸಾರ್ವಜನಿಕ ಜಾಗೃತಿ, ಮಾರ್ಗದರ್ಶನ ಹಾಗೂ ಸಾರ್ವಜನಿಕ ಸಹಾಯ ಶಿಬಿರ ಕೋಟೆಬಾಗಿಲಿನ ಮೊಹಮ್ಮದೀಯ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ನಡೆಯಿತು.

201 ಮೂಡುಬಿದಿರೆ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ಇಲಾಖೆಯಿಂದ ನೇಮಕಗೊಂಡ ಅಧಿಕೃತ ಮಾಸ್ಟರ್ ಟ್ರೈನರ್‌ಗಳಾದ ರಾಮ್ ಪ್ರಸಾದ್ ಹಾಗೂ ಹರ್ಷ ಎಂ. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.

ರಾಮ್ ಪ್ರಸಾದ್ ಮಾತನಾಡಿ, ಬಿಎಲ್‌ಒಗಳು ಮನೆಗೆ ಭೇಟಿ ನೀಡಿದಾಗ ಅಗತ್ಯ ದಾಖಲೆಗಳು ಮತ್ತು ಸರಿಯಾದ ಮಾಹಿತಿಯನ್ನು ನೀಡಬೇಕು. ಮೂರು ಬಾರಿ ಭೇಟಿ ನೀಡಿದರೂ ಮನೆ ಬಾಗಿಲು ಮುಚ್ಚಿದ್ದರೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು. ಹೊಸ ಮತದಾರರ ಸೇರ್ಪಡೆ ಈ ವರ್ಷದ ಅಕ್ಟೋಬರ್‌ನಲ್ಲಿ ನಡೆಯುವ ಸಾಧ್ಯತೆ ಇದೆ ಎಂದರು.

ಎಸ್‌ಐಆರ್-2026 ಪ್ರಕ್ರಿಯೆ, ಮತದಾರರ ಪರಿಶೀಲನೆ, ಎಣಿಕೆ ನಮೂನೆ ಭರ್ತಿ ಹಾಗೂ ಅಗತ್ಯ ದಾಖಲೆಗಳ ಕುರಿತು ಮಾಹಿತಿ ನೀಡಿದರು. ಹರ್ಷ ಎಂ. ಎಣಿಕೆ ನಮೂನೆ ಭರ್ತಿ, ದಾಖಲೆಗಳ ಪರಿಶೀಲನೆ ಹಾಗೂ ಮತದಾರರ ಮಾಹಿತಿಯನ್ನು ನವೀಕರಿಸುವ ಕುರಿತು ಪ್ರಾತ್ಯಕ್ಷಿಕೆ ನೀಡಿದರು.

ಎರಡನೇ ಹಂತದಲ್ಲಿ ಎನ್‌ಎನ್‌ಒ ಸಮುದಾಯ ಕೇಂದ್ರದ ವತಿಯಿಂದ ಸಾರ್ವಜನಿಕ ಸಹಾಯ ಕೇಂದ್ರ ತೆರೆಯಲಾಗಿದ್ದು, ಸಿಬ್ಬಂದಿ ಮತ್ತು ಸ್ವಯಂಸೇವಕರು ದಾಖಲೆಗಳ ಪರಿಶೀಲನೆ, ದೋಷಗಳ ತಿದ್ದುಪಡಿ ಹಾಗೂ ಅರ್ಜಿ ಸಲ್ಲಿಕೆಗೆ ನೆರವು ನೀಡಿದರು. ವಿದೇಶದಲ್ಲಿರುವ ಎನ್‌ಆರ್‌ಐ ನಾಗರಿಕರಿಗಾಗಿ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಲಾಗಿದ್ದು, ವಾಟ್ಸಾಪ್ ಮೂಲಕವೂ ಪ್ರಶ್ನೆಗಳನ್ನು ಸ್ವೀಕರಿಸಿ ಉತ್ತರಿಸಲಾಯಿತು.

ಎನ್‌ಎನ್‌ಒ ಟ್ರಸ್ಟಿ ಅಬ್ದುಲ್ ಹಮೀದ್, ಜಮೀಯ್ಯತುಲ್ ಫಲಾಹ್ ಮೂಡುಬಿದಿರೆ ತಾಲೂಕು ಘಟಕದ ಕಾರ್ಯದರ್ಶಿ ಅಶ್ರಫ್ ಮರೋಡಿ, ಖಜಾಂಚಿ ಶೈಖ್ ಅಬ್ದುಲ್ ಗಫೂರ್, ನಮ್ಮ ನಾಡ ಒಕ್ಕೂಟ ಮೂಡುಬಿದಿರೆ ಘಟಕದ ಕಾರ್ಯದರ್ಶಿ ರಝಾಕ್ ಮದನಿ, ಖಜಾಂಚಿ ರಿಜ್ವಾನ್ ಅಹ್ಮದ್, ಸೌಹಾರ್ದ ಮೂಡುಬಿದಿರೆ ಅಧ್ಯಕ್ಷ ಮೊಹಮ್ಮದ್ ಶರೀಫ್, ಮೊಹಮ್ಮದೀಯ ಇಂಗ್ಲಿಷ್ ಮೀಡಿಯಂ ಶಾಲಾ ಸಮಿತಿಯ ಅಧ್ಯಕ್ಷ ಮಕ್ಬೂಲ್ ಹುಸೈನ್, ಕಾರ್ಯದರ್ಶಿ ಪಾರ್ಕರ್ ಶರೀಫ್ ಸಾಹೇಬ್, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಜಮೀಯ್ಯತುಲ್ ಫಲಾಹ್ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ, ನಮ್ಮ ನಾಡ ಒಕ್ಕೂಟ ಮೂಡುಬಿದಿರೆ ಘಟಕದ ಅಧ್ಯಕ್ಷ ಶೇಖ್ ನೂರುದ್ದೀನ್ ಕಾರ್ಯಕ್ರಮ ನಿರ್ವಹಿಸಿದರು.