ಮೂಡುಬಿದಿರೆ: ಕೀರ್ತಿಶೇಷ ಇರ್ವತ್ತೂರು ಅನಂತ ಭಟ್ಟರ ಸಂಸ್ಮರಣೆಯ ಅಂಗವಾಗಿ ಅಮೃತ ಸಾವಯವ ಮಳಿಗೆ ಹಾಗೂ ಸಾವಯವ ಕೃಷಿಕರ ಬಳಗ, ಮೂಡುಬಿದಿರೆ ಆಶ್ರಯದಲ್ಲಿ ಅಲಂಗಾರು ಜನತಾ ವಿವಿಧೋದ್ದೇಶ ಸಹಕಾರಿ ಸಂಘದ ವಠಾರದಲ್ಲಿ ಔಷಧೀಯ ಸಸ್ಯಗಳು, ತರಕಾರಿ ಬೀಜಗಳು ಹಾಗೂ ಗೋಕ್ರಪಾಮೃತವನ್ನು ಉಚಿತವಾಗಿ ವಿತರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ ಜಿಲ್ಲಾ ಹಿರಿಯ ಸಹಕಾರಿ ಧುರೀಣ ಎಂ. ದಯಾನಂದ ಪೈ ಮಾತನಾಡಿ, ಔಷಧೀಯ ಸಸ್ಯಗಳ ಸಂರಕ್ಷಣೆ ಹಾಗೂ ಸಾವಯವ ಕೃಷಿಗೆ ಜೀವನವಿಡೀ ಶ್ರಮಿಸಿದ ಕೀರ್ತಿಶೇಷ ಇರ್ವತ್ತೂರು ಅನಂತ ಭಟ್ಟರ ಸೇವೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ನಡೆಯುತ್ತಿರುವುದು ಶ್ಲಾಘನೀಯ ಎಂದರು. ಮುಂದಿನ ದಿನಗಳಲ್ಲಿ ಮೂಡುಬಿದಿರೆಯಲ್ಲಿ ಜಿಲ್ಲಾ ಮಟ್ಟದ ಸ್ವಾವಲಂಬಿ ಸಾವಯವ ಕೃಷಿ ಮೇಳ ಆಯೋಜಿಸುವ ಉದ್ದೇಶವಿದೆ ಎಂದರು.
ಪಡುಮಾರ್ನಾಡು ದಯಾನಂದ ಭಟ್, ಜಿನೇಂದ್ರ ಹೆಗ್ಡೆ, ಅಮೃತ ಸಾವಯವ ಮಳಿಗೆಯ ಅಶೋಕ್ ಭಂಡಾರಿ, ಇರ್ವತ್ತೂರು ವೆಂಕಟರಮಣ ಭಟ್ ಹಾಗೂ ಮೂಡುಬಿದಿರೆಯ ವಾಸ್ತು ತಜ್ಞ ಎಂ. ರಾಘವೇಂದ್ರ ಭಂಡಾರ್ಕರ್ ಅನಂತ ಭಟ್ಟರ ಸೇವೆ ಹಾಗೂ ಸಾವಯವ ಕೃಷಿಯ ಮಹತ್ವದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ಗೋಪೂಜೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಇರ್ವತ್ತೂರು ಅನಂತ ಭಟ್ಟರ ಸುಪುತ್ರ ಇರ್ವತ್ತೂರು ವೆಂಕಟರಮಣ ಭಟ್ ನೂರಕ್ಕೂ ಹೆಚ್ಚು ಔಷಧೀಯ ಸಸ್ಯಗಳ ಪರಿಚಯ ನೀಡಿದರು. ಬಳಿಕ ಔಷಧೀಯ ಸಸ್ಯಗಳು, ತರಕಾರಿ ಬೀಜಗಳು ಹಾಗೂ ಗೋಕ್ರಪಾಮೃತವನ್ನು ವಿತರಿಸಲಾಯಿತು.
ರವಿಶಂಕರ್ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಕೇಂದ್ರದ ಶಿಕ್ಷಕ ಉದಯ ಗೋಆಧಾರಿತ ಕೃಷಿಯ ಕುರಿತು ಮಾಹಿತಿ ನೀಡಿದರು. ಅಶೋಕ್ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪಡುಮಾರ್ನಾಡು ದಯಾನಂದ ಭಟ್ ನಿರೂಪಿಸಿದರು. ಪೆರಿಂಜೆ ಗೋಪಾಲಕೃಷ್ಣ ಭಟ್ ವಂದಿಸಿದರು. ಮೂಡುಬಿದಿರೆ ತಾಲೂಕಿನ 50ಕ್ಕೂ ಹೆಚ್ಚು ಸಾವಯವ ರೈತರು ಭಾಗವಹಿಸಿ ತಮ್ಮ ಅನುಭವ ಹಂಚಿಕೊಂಡರು.