ಮೂಡುಬಿದಿರೆ: ಬಹುಭಾಷಾ ಯಕ್ಷಗಾನ ವೇಷಧಾರಿ, ತಾಳಮದ್ದಳೆ ಅರ್ಥದಾರಿ, ಲೇಖಕ, ವಾಗ್ಮಿ, ವಿಮರ್ಶಕ, ಯಕ್ಷಗಾನ ಪ್ರಸಂಗ ರಚನಕಾರ ಹಾಗೂ ಯಕ್ಷಗಾನ ಸಂಘಟಕರಾಗಿ ಶಾಂತರಾಮ ಕುಡ್ವ ಸಲ್ಲಿಸಿರುವ ಸೇವೆ ಅಪಾರವಾಗಿದೆ ಎಂದು ವಾಸ್ತು ತಜ್ಞ ಮಾರೂರು ರಾಘವೇಂದ್ರ ಭಂಡಾರ್ಕಾರ್ ಹೇಳಿದರು.
ಜನತಾ ವಿವಿದುದ್ದೇಶ ಸಹಕಾರೀ ಸಂಘ ಪಡುಮಾರ್ನಾಡು ಹಾಗೂ ಸಾವಯವ ಕೃಷಿಕ ಬಳಗ ಮೂಡುಬಿದಿರೆ ಆಶ್ರಯದಲ್ಲಿ ಯಕ್ಷಗಾನ ಕಲಾವಿದ ಮತ್ತು ವಿಮರ್ಶಕ ಶಾಂತರಾಮ ಕುಡ್ವರಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅಭಿನಂದನಾ ಭಾಷಣ ಮಾಡಿದ ಅವರು, ಮೂಡುಬಿದಿರೆಯಲ್ಲಿ ಹತ್ತಕ್ಕೂ ಹೆಚ್ಚು ಯಕ್ಷಗಾನ ಸಂಘಟನೆಗಳಿದ್ದು, ಯಕ್ಷೋಪಾಸನಮ್, ಯಕ್ಷ ಸಂಗಮ ಹಾಗೂ ಯಕ್ಷ ಸಾರಸ್ವತ ಸಂಸ್ಥೆಗಳನ್ನು ಸ್ಥಾಪಿಸಿ ನಿರಂತರವಾಗಿ ಮುನ್ನಡೆಸುತ್ತಿರುವ ಶಾಂತರಾಮ ಕುಡ್ವರ ನಿಸ್ವಾರ್ಥ ಪರಿಶ್ರಮದಿಂದ ಮೂಡುಬಿದಿರೆ ವಿದ್ಯಾಕಾಶಿಯ ಜೊತೆಗೆ ಯಕ್ಷಗಾನ ಕಾಶಿಯಾಗಿಯೂ ಗುರುತಿಸಿಕೊಂಡಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಶಾಂತರಾಮ ಕುಡ್ವ, ಅನ್ನದಾತರಾಗಿರುವ ಸಾವಯವ ಕೃಷಿಕ ಬಳಗ ಹಾಗೂ ಜನತಾ ವಿವಿದುದ್ದೇಶ ಸಹಕಾರೀ ಸಂಘದಿಂದ ದೊರೆತ ಗೌರವ ಜೀವನದಲ್ಲಿ ಮರೆಯಲಾಗದು ಎಂದು ಕೃತಜ್ಞತೆ ವ್ಯಕ್ತಪಡಿಸಿದರು. ಕೃಷಿ ವಿಚಾರಗಳನ್ನು ಆಧರಿಸಿ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ "ಕೃಷಿ ವಿಜಯ" ತಾಳಮದ್ದಳೆ ಕಾರ್ಯಕ್ರಮ ಆಯೋಜಿಸಿದ್ದ ಸಂದರ್ಭವನ್ನೂ ಅವರು ಸ್ಮರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜನತಾ ವಿವಿದುದ್ದೇಶ ಸಹಕಾರೀ ಸಂಘದ ಅಧ್ಯಕ್ಷ ಪಡುಮಾರ್ನಾಡು ದಯಾನಂದ ಪೈ ಮಾತನಾಡಿ, ಶಾಂತರಾಮ ಕುಡ್ವರಿಗೆ ದೇಶ-ವಿದೇಶಗಳಲ್ಲಿ 350ಕ್ಕೂ ಹೆಚ್ಚು ಸನ್ಮಾನಗಳು ಲಭಿಸಿವೆ. ಯಕ್ಷಗಾನಕ್ಕಾಗಿ ಬದುಕನ್ನು ಮುಡಿಪಾಗಿಟ್ಟಿರುವ ಅವರು, ಕಡಲಕೆರೆ ಪ್ರೇರಣಾ ಶಾಲೆಯ ಸಂಚಾಲಕರಾಗಿ ಶಿಕ್ಷಣ ಕ್ಷೇತ್ರದಲ್ಲಿಯೂ ಮಾದರಿ ಸೇವೆ ಸಲ್ಲಿಸಿದ್ದಾರೆ ಎಂದು ಪ್ರಶಂಸಿಸಿದರು.
ಪ್ರಗತಿಪರ ಸಾವಯವ ಕೃಷಿಕ ಇರ್ವತ್ತೂರು ವೆಂಕಟರಮಣ ಭಟ್, ದಯಾನಂದ ಭಟ್ ಅಚ್ಚರಕಟ್ಟೆ, ಅಮೃತ ಸಾವಯವ ಮಳಿಗೆಯ ಅಶೋಕ್ ಭಂಡಾರಿ, ರೈತ ಸಂಘದ ಅಧ್ಯಕ್ಷ ಹರಿಪ್ರಸಾದ್ ನಾಯಕ್, ಸಾವಯವ ಕೃಷಿಕ ಗೋಪಾಲಕೃಷ್ಣ ಭಟ್, ಜಿನೇಂದ್ರ ಹೆಗ್ಡೆ, ಕಾರ್ಪೋರೇಶನ್ ಬ್ಯಾಂಕ್ ನಿವೃತ್ತ ಸೀನಿಯರ್ ಮ್ಯಾನೇಜರ್ ಸುಧೀರ್ ನಾಯಕ್, ನಿವೃತ್ತ ಬ್ಯಾಂಕ್ ಉದ್ಯೋಗಿ ಪ್ರಭಾಕರ ಪ್ರಭು ಹಾಗೂ ನವೀನ್ ಅಂಬೂರಿ ಉಪಸ್ಥಿತರಿದ್ದರು.
ದಯಾನಂದ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಅಶೋಕ್ ಭಂಡಾರಿ ವಂದಿಸಿದರು.