ಮೂಡುಬಿದಿರೆ: ನೇತಾಜಿ ಬ್ರಿಗೇಡ್ ವತಿಯಿಂದ 156ನೇ ವಾರದ ಸ್ವಚ್ಛತಾ ಕಾರ್ಯ, ಶ್ರಮದಾನ ಸ್ವರಾಜ್ಯ ಮೈದಾನದ ಕೆಳಭಾಗದ ಆಟದ ಮೈದಾನದ ಬಳಿ ನಡೆಯಿತು.

ಶ್ರಮದಾನದ ವೇಳೆ ಸುಮಾರು 10 ಬ್ಯಾಗ್‌ಗಳಷ್ಟು ತ್ಯಾಜ್ಯ, ಪ್ಲಾಸ್ಟಿಕ್, ಗಾಜಿನ ಬಾಟಲಿಗಳನ್ನು ತೆರವುಗೊಳಿಸಲಾಯಿತು. ಈ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಕಸ ಹಾಕುವವರ ವಿರುದ್ಧ ಪುರಸಭೆ ವತಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಜೊತೆಗೆ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸುವ ಭರವಸೆ ದೊರೆತಿದೆ ಎಂದು ತಿಳಿಸಲಾಗಿದೆ.

ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯದೆ, ತ್ಯಾಜ್ಯವನ್ನು ವಿಂಗಡಿಸಿ ಪುರಸಭೆಯ ತ್ಯಾಜ್ಯ ವಿಲೇವಾರಿ ವಾಹನಕ್ಕೆ ನೀಡಿ ಸಹಕರಿಸುವಂತೆ ನೇತಾಜಿ ಬ್ರಿಗೇಡ್ ಮನವಿ ಮಾಡಿದೆ.

156ನೇ ವಾರದ ಸ್ವಚ್ಛತಾ ಕಾರ್ಯದಲ್ಲಿ ನೇತಾಜಿ ಬ್ರಿಗೇಡ್ ಸಂಚಾಲಕ ರಾಹುಲ್ ಕುಲಾಲ್, ಅಧ್ಯಕ್ಷ ದಿನೇಶ್ ಶೆಟ್ಟಿ ಏದಾಡಿ, ಪದಾಧಿಕಾರಿಗಳಾದ ಆನಂದ ಕುಲಾಲ್, ಎಸ್. ಕುಮಾರ್ ಮಾಸ್ತಿಕಟ್ಟೆ, ದಯಾನಂದ ನಾಯ್ಕ್, ನಿತ್ಯಾನಂದ, ದಯಾನಂದ ಕುಲಾಲ್ ಲಾಡಿ, ನಿಖಿಲ್ ಭಟ್, ನಿತಿನ್ ಭಟ್, ಸುಂದರ ಮಲಿಂಜೆ ಉಪಸ್ಥಿತರಿದ್ದರು.