ಮೂಡುಬಿದಿರೆ: ದೇಹದ ಬಹುತೇಕ ಅಂಗಾಂಗಗಳಿಗೆ ಕೃತಕ ಅಂಗಾಂಗ ಜೋಡಿಸುವ ವ್ಯವಸ್ಥೆ ಲಭ್ಯವಿದ್ದರೂ, ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ರಕ್ತಕ್ಕೆ ಪರ್ಯಾಯವೂ ಇಲ್ಲದ ಕಾರಣ ರಕ್ತದಾನ ಶ್ರೇಷ್ಠ ದಾನವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಮೂಡುಬಿದಿರೆ ಪ್ರಖಂಡದ ಅಧ್ಯಕ್ಷ ಎಂ. ಶಾಂತರಾಮ ಕುಡ್ವ ಹೇಳಿದರು.

ಮಾರೂರು ಕುಂಟೋಡಿಯ ಶ್ರೀ ಜೈ ಭವಾನಿ ದೇವಸ್ಥಾನದ ವಠಾರದಲ್ಲಿ ಭಾನುವಾರ ವಿಶ್ವ ಹಿಂದೂ ಪರಿಷತ್, ಭಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಕೇಸರಿ ನಂದನ ಘಟಕ ಮಾರೂರು, ಜೈ ಭವಾನಿ ಸೇವಾ ಗೆಳೆಯರ ಬಳಗ ಮಾರೂರು, ಜೈ ಭವಾನಿ ಸ್ವಸಹಾಯ ಸಂಘ ಮಾರೂರು ಆಶ್ರಯದಲ್ಲಿ, ಆಳ್ವಾಸ್ ಹೆಲ್ತ್ ಸೆಂಟರ್, ಮಲ್ಲಿ ಸ್ಪೆಷಾಲಿಟಿ ಆಸ್ಪತ್ರೆ ಮೂಡುಬಿದಿರೆ, ಆಳ್ವಾಸ್ ಆಯುರ್ವೇದ ಆಸ್ಪತ್ರೆ ವಿದ್ಯಾಗಿರಿ, ಆಳ್ವಾಸ್ ಕಾಲೇಜ್ ಆಫ್ ಫಿಸಿಯೋಥೆರಪಿ ಮೂಡುಬಿದಿರೆ ಸಹಯೋಗದಲ್ಲಿ ನಡೆದ ಉಚಿತ ಮೆಗಾ ವೈದ್ಯಕೀಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಅಂಚೆ ಜನಸಂಪರ್ಕ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ಮಾರೂರು ಗುತ್ತು ಶಂಭು ಎನ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಸುಹಾನ್ ಫ್ಲೋರಿಂಗ್ಸ್ ಮಾಲಕ ಸುಶಾಂತ್ ಕರ್ಕೇರಾ ಮಾರೂರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸುವ ಇಂತಹ ಜನೋಪಯೋಗಿ ಕಾರ್ಯಕ್ರಮಗಳು ಸಾರ್ವಜನಿಕರಿಗೆ ಹೆಚ್ಚಿನ ಪ್ರಯೋಜನವಾಗಿದ್ದು, ಇಂತಹ ಸೇವಾ ಚಟುವಟಿಕೆಗಳಿಗೆ ತಮ್ಮ ಸಹಕಾರ ಮುಂದುವರಿಯಲಿದೆ ಎಂದರು.

ಪ್ರಮುಖರಾದ ಯಶೋಧರ ದೇವಾಡಿಗ, ಸರಸ್ವತಿ ನವೀನ್ ಶೆಟ್ಟಿ, ಗುರುಪ್ರಸಾದ್ ಕೆ.ಎಸ್., ಡಾ. ರಾಜೇಶ್ ಹವಾಲ್ದಾರ್, ಡಾ. ರುಕ್ಕಾ, ರಾಜೇಶ್ ಉಪಸ್ಥಿತರಿದ್ದರು. ಗುರುಪ್ರಸಾದ್ ಕೆ.ಎಸ್. ಅಂಚೆ ವಿಮಾ ಯೋಜನೆ ಕುರಿತು ಮಾಹಿತಿ ನೀಡಿದರು.

ತಜ್ಞ ವೈದ್ಯರ ತಂಡ ಉಚಿತ ಔಷಧಿ ವಿತರಣೆ, ಚಿಕಿತ್ಸಾ ಸಲಹೆ ನೀಡಿತು. ಶಿಬಿರದಲ್ಲಿ ಸಕ್ಕರೆ ಕಾಯಿಲೆ, ಹೃದಯ ರೋಗ, ಚರ್ಮರೋಗ, ರಕ್ತದೊತ್ತಡ, ಸ್ಪೀರೋಗ್ರಫಿ, ಪ್ರಸೂತಿ ತಪಾಸಣೆ, ಉಚಿತ ಫಿಸಿಯೋಥೆರಪಿ, ಇಸಿಜಿ, ಇಎನ್‌ಟಿ, ಗಂಟು, ಕೀಲು ನೋವು ಸೇರಿದಂತೆ ವಿವಿಧ ಆರೋಗ್ಯ ತಪಾಸಣೆ ನಡೆಸಲಾಯಿತು. ಶೋಭಾ ಸ್ವಾಗತಿಸಿದರು. ಶೋಭಾ ನಿರೂಪಿಸಿದರು. ಭವ್ಯಾ ವಂದಿಸಿದರು.