ಮೂಡುಬಿದಿರೆ: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪಡುಬಿದ್ರಿ ಶಾಖೆಯ 4ನೇ ವಾರ್ಷಿಕೋತ್ಸವ, ಗ್ರಾಹಕರ ಸಭೆ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಪಡುಬಿದ್ರಿ ಶಾಖೆಯಲ್ಲಿ ವಾರ ಜರುಗಿತು.
ಶೀನ ಪೂಜಾರಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಅಗತ್ಯ ಸಂದರ್ಭಗಳಲ್ಲಿ ಗ್ರಾಹಕರ ಮನೆಗೆ ತೆರಳಿ ಸೇವೆ ನೀಡುತ್ತಿರುವ ಆತ್ಮಶಕ್ತಿ ಸಂಘದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಸುನಿಲ್ ಕುಮಾರ್ ಮಾತನಾಡಿ, ಬ್ಯಾಂಕಿಂಗ್ ಕ್ಷೇತ್ರಕ್ಕೆ ಸೀಮಿತವಾಗದೆ ವಿವಿಧ ಸಮಾಜಮುಖಿ ಚಟುವಟಿಕೆಗಳಲ್ಲಿ ಸಂಘ ತೊಡಗಿಸಿಕೊಂಡಿದ್ದು, ಇನ್ನಷ್ಟು ಉನ್ನತ ಸ್ಥಾನಕ್ಕೇರಲಿ ಎಂದು ಹಾರೈಸಿದರು. ಶಶಿಕಾಂತ್ ಪಡುಬಿದ್ರಿ ಮಾತನಾಡಿ, ಆಡಳಿತ ಮಂಡಳಿಯ ಮಾರ್ಗದರ್ಶನ, ಸಿಬ್ಬಂದಿಯ ಉತ್ತಮ ಸೇವೆಯಿಂದ ಸಂಘ ಉತ್ತಮ ಪ್ರಗತಿ ಸಾಧಿಸಿದೆ ಎಂದರು.
ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮಾತನಾಡಿ, ಗ್ರಾಹಕರ ಪ್ರೋತ್ಸಾಹದಿಂದ ಸಂಘ ಬೆಳವಣಿಗೆ ಹೊಂದಿದ್ದು, ವೈದ್ಯಕೀಯ ಶಿಬಿರ, ವಿಮಾ ಸೌಲಭ್ಯ, ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಮುಂಬರುವ ಮಹಾಸಭೆಯಲ್ಲಿ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದರು.
ಪಡುಬಿದ್ರಿ ಶಾಖೆಯ ನಾಲ್ಕನೇ ವಾರ್ಷಿಕೋತ್ಸವ ಅಂಗವಾಗಿ 500 ದಿನಗಳ ಠೇವಣಿಗೆ ಶೇ.10, 1000 ದಿನಗಳ ಠೇವಣಿಗೆ ಶೇ.10.50 ವಿಶೇಷ ಬಡ್ಡಿದರ ಘೋಷಿಸಲಾಗಿದ್ದು, ಚಿನ್ನಾಭರಣ ಸಾಲಕ್ಕೆ ಪ್ರತಿ ಗ್ರಾಂಗೆ ಗರಿಷ್ಠ ₹12,000ರವರೆಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲ ನೀಡಲಾಗುವುದು ಎಂದು ತಿಳಿಸಿದರು.
ಉಪಾಧ್ಯಕ್ಷ ನೇಮಿರಾಜ್ ಪಿ., ನಿರ್ದೇಶಕರಾದ ಬಿ.ಪಿ. ದಿವಾಕರ್, ಉಮಾವತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಉಪಸ್ಥಿತರಿದ್ದರು. ಹಿರಿಯ ಶಾಖಾಧಿಕಾರಿ ಸ್ವಾತಿ ನಿರೂಪಿಸಿದರು. ಸಿಬ್ಬಂದಿ ಲೋಶಿತಾ ವಂದಿಸಿದರು.