ಮೂಡುಬಿದಿರೆ: ಕಡಂದಲೆ ಗ್ರಾಮದ ಕಲ್ಲೋಳಿ ರಸ್ತೆಯ ದುಸ್ಥಿತಿ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.
ಗ್ರಾಮದ ವಿವಿಧೆಡೆ ಚುನಾವಣೆ ಬಹಿಷ್ಕಾರದ ಬ್ಯಾನರ್‌ಗಳನ್ನು ಅಳವಡಿಸಿರುವ ನಿವಾಸಿಗಳು, ರಸ್ತೆ ದುರಸ್ತಿಯಾಗುವವರೆಗೆ ಯಾವುದೇ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಗ್ರಾಮಸ್ಥರಿಂದ ಖಡಕ್ ಸಂದೇಶ ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಅಳವಡಿಸಿರುವ ಬ್ಯಾನರ್‌ಗಳಲ್ಲಿ "ರಸ್ತೆ ಸರಿಪಡಿಸಿ... ಇಲ್ಲದಿದ್ದರೆ ಮತವಿಲ್ಲ", "ಮತ ಭಿಕ್ಷೆಗೆ ಮನೆ ಮನೆಗೆ ಬರಬೇಡಿ" ಹಾಗೂ "ನಿಮ್ಮ ರಾಜಕೀಯ ಜೀವನ ಕೇವಲ ಶೋಕಿಗೆ ಹೊರತುಪಡಿಸಿ ಅಭಿವೃದ್ಧಿಯ ಕಡೆ ಗಮನಿಸಿ" ಎಂಬ ಘೋಷಣೆಗಳ ಮೂಲಕ ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲಾಗಿದೆ. ಹಲವು ವರ್ಷಗಳಿಂದ ರಸ್ತೆ ದುರಸ್ತಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. "ರಸ್ತೆ ಅಭಿವೃದ್ಧಿಗೆ ಸ್ಪಷ್ಟ ಕ್ರಮ ಕೈಗೊಳ್ಳುವವರೆಗೆ ಯಾವುದೇ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ. ಮತ ಕೇಳಲು ಮನೆ ಮನೆಗೆ ಬರುವುದಕ್ಕಿಂತ ಮೊದಲು ರಸ್ತೆ ನಿರ್ಮಿಸಬೇಕು," ಎಂದು ಗ್ರಾಮಸ್ಥರು ಬ್ಯಾನರ್‌ಗಳ ಮೂಲಕ ಎಚ್ಚರಿಕೆ ನೀಡಿದ್ದಾರೆ.
ನಾಲ್ಕು ವರ್ಷಗಳಿಂದ ಬೇಡಿಕೆ ಕಲ್ಲೋಳಿ ರಸ್ತೆಯು ಸಂಪೂರ್ಣ ಹದಗೆಟ್ಟ ಪರಿಣಾಮ ನೂರಾರು ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ. ಸಾವಿರಾರು ಮತದಾರರು ವಾಸಿಸುವ ಈ ಭಾಗದಲ್ಲಿ ವಾಹನ ಸಂಚಾರ ದುಸ್ತರವಾಗಿದ್ದು, ತುರ್ತು ಸಂದರ್ಭಗಳಲ್ಲಿಯೂ ಆಟೋ ಚಾಲಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ವಿದ್ಯಾರ್ಥಿಗಳು, ವೃದ್ಧರು ಹಾಗೂ ರೋಗಿಗಳ ಸಂಚಾರಕ್ಕೂ ರಸ್ತೆ ದುಸ್ಥಿತಿ ತೀವ್ರ ತೊಂದರೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
2022ರ ಜುಲೈನಲ್ಲಿ ನೆರೆ ಹಾನಿ ಸಂಭವಿಸಿದ ವೇಳೆ ಶಾಸಕ ಉಮಾನಾಥ ಕೋಟ್ಯಾನ್ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಯ ಭರವಸೆ ನೀಡಿದ್ದರು. ಆದರೆ ನಾಲ್ಕು ವರ್ಷಗಳು ಕಳೆದರೂ ಯಾವುದೇ ಕಾಮಗಾರಿ ಆರಂಭವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮಳೆಯ ನೆಪ ಬೇಡ-ದುರಸ್ತಿಯಾಗದಿದ್ದರೆ ಮುತ್ತಿಗೆ
ಮಳೆಯ ನೆಪ ಹೇಳಿ ರಸ್ತೆ ಕಾಮಗಾರಿಯನ್ನು ಮತ್ತಷ್ಟು ವಿಳಂಬ ಮಾಡಬಾರದು. ತಕ್ಷಣವೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಮಳೆಗಾಲದಲ್ಲಿ ಮತ್ತೆ ನೆರೆ ಹಾವಳಿ ಉಂಟಾಗುವ ಸಾಧ್ಯತೆ ಇರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ರಸ್ತೆ ದುರಸ್ತಿಗೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
"ಕಳೆದ ನಾಲ್ಕೈದು ವರ್ಷಗಳಿಂದ ರಸ್ತೆ ದುರಸ್ತಿಗಾಗಿ ಮನವಿ ಮಾಡುತ್ತಿದ್ದೇವೆ. ಆದರೆ ಇದುವರೆಗೆ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ. ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರ ಸಂಚಾರವೇ ದುಸ್ತರವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ರಸ್ತೆ ದುರಸ್ತಿಗೆ ಶಾಶ್ವತ ಕ್ರಮ ಕೈಗೊಳ್ಳಬೇಕು." – ಸಂತೋಷ್ ಶೆಟ್ಟಿಗಾರ್, ಕಲ್ಲೋಳಿ, ಹೋರಾಟದ ಪ್ರಮುಖರು
ವಿಶೇಷ ವರದಿ : ಯಶೋಧರ ವಿ. ಬಂಗೇರ