ಮೂಡುಬಿದಿರೆ: ಹೈ ಬಿಪಿಯಿಂದ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಂಗಳೂರು ಮೂಡುಮೂರ್ನಾಡು ಪಲ್ಲ ಹೊಸಮನೆ ನಿವಾಸಿ ಭೋಜ ಅವರ ಚಿಕಿತ್ಸೆಗೆ ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್, ಮಿಜಾರು ವತಿಯಿಂದ ₹15 ಸಾವಿರ ನೆರವು ನೀಡಲಾಯಿತು.

ಭೋಜ ಅವರು ಏಪ್ರಿಲ್ 29ರಂದು ಹೈ ಬಿಪಿಯಿಂದ ಮೂರ್ಛೆಗೊಂಡಿದ್ದು, ಪ್ರಸ್ತುತ ಮಂಗಳೂರಿನ ಕಂಕನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಸುಮಾರು ₹4 ಲಕ್ಷಕ್ಕೂ ಅಧಿಕ ವೆಚ್ಚವಾಗಿದ್ದು, ಮುಂದಿನ ಚಿಕಿತ್ಸೆಯ ಖರ್ಚು ಭರಿಸುವುದು ಕುಟುಂಬಕ್ಕೆ ಕಷ್ಟಕರವಾಗಿದೆ. ಕುಟುಂಬದಲ್ಲಿ ಇಬ್ಬರು ಮಕ್ಕಳಿದ್ದು, ಒಬ್ಬ ಮಗ ವಿಶೇಷ ಚೇತನರಾಗಿದ್ದಾರೆ. ಭೋಜ ಅವರ ಮಗಳು ಮೂಡುಬಿದಿರೆಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮನೆಯ ಆಧಾರವಾಗಿದ್ದ ತಂದೆಯೂ ಹಾಸಿಗೆ ಹಿಡಿದಿರುವ ಕಾರಣ ಮನೆ ಹಾಗೂ ಆಸ್ಪತ್ರೆಯ ವೆಚ್ಚ ನಿಭಾಯಿಸಲು ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನೆರವು ನೀಡುವಂತೆ ಅವರು ಟ್ರಸ್ಟ್‌ಗೆ ಮನವಿ ಮಾಡಿದ್ದರು.

ಮನವಿಗೆ ಸ್ಪಂದಿಸಿದ ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್‌ನ 74ನೇ ಮಾಸಿಕ ಸೇವಾಯೋಜನೆಯ ಅಂಗವಾಗಿ ₹15 ಸಾವಿರ ಮೊತ್ತದ ಚೆಕ್ಕನ್ನು ಆದಿಶಕ್ತಿ ಮಾರಿಗುಡಿ) ದೇವಸ್ಥಾನ, ಮೂಡುಬಿದಿರೆ ಮೊಕ್ತೇಸರಾದ ರಾಜಮೋಹನ್ ಶೆಟ್ಟಿ ಹಸ್ತಾಂತರಿಸಿದರು.

ತಂಡದ ಅಧ್ಯಕ್ಷ ಸಂದೀಪ್ ಮಿಜಾರ್, ಕಾರ್ಯದರ್ಶಿ ದಯಾನಂದ ಉರ್ಕಿ, ಸೇವಾ ಮಾಣಿಕ್ಯ ಯತೀಶ್ ಮಾರ್ನಾಡ್ ಉಪಸ್ಥಿತರಿದ್ದರು. ಪ್ರತ್ಯಕ್ಷ, ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಟ್ರಸ್ಟ್‌ನ ಕಾರ್ಯವಿಭಾಗ ವಂದಿಸಿದರು.