ಮೂಡುಬಿದಿರೆ: ಯುವವಾಹಿನಿ ಮೂಡುಬಿದಿರೆ ಘಟಕ, ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ, ವೀಚೀಸ್ ಕೌಶಲ್ಯಪರ ತರಬೇತಿ ಕೇಂದ್ರ, ಮೂಡುಬಿದಿರೆ ಇವರ ಜಂಟಿ ಆಶ್ರಯದಲ್ಲಿ ನಡೆದ ಐದು ದಿನಗಳ ಉಚಿತ ಸೀರೆ ಕುಚ್ಚು ಕೌಶಲ್ಯ ತರಬೇತಿಯ ಸಮಾರೋಪ ಸಭೆ ವಾರ ಮೂಡುಬಿದಿರೆಯ ಸಮಾಜ ಮಂದಿರ ಸಭಾಂಗಣದಲ್ಲಿ ನಡೆಯಿತು.

ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲದ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಮಾತನಾಡಿ, ಮಹಿಳೆಯರು ಕಾಲಕ್ಕೆ ತಕ್ಕ ಬೇಡಿಕೆಗೆ ಅನುಗುಣವಾಗಿ ಕೌಶಲ್ಯ ತರಬೇತಿ ಪಡೆದು ಸ್ವ ಉದ್ಯೋಗ ಆರಂಭಿಸಬೇಕು. ಬೇಡಿಕೆ ಇರುವ ಸಂದರ್ಭ ಮನೆಯಿಂದಲೇ ಉದ್ಯೋಗ ನಿರ್ವಹಿಸಿ ಉತ್ತಮ ಆದಾಯ ಗಳಿಸಲು ಸಾಧ್ಯವಿದೆ ಎಂದು ಹೇಳಿದರು.

ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ತರಬೇತಿಯಲ್ಲಿ ಭಾಗವಹಿಸಿದ ಮಹಿಳೆಯರ ಕೌಶಲ್ಯವನ್ನು ಮೆಚ್ಚಿ, ಸ್ವ ಉದ್ಯೋಗ ಆರಂಭಿಸಲು ಯುವವಾಹಿನಿಯಿಂದ ಅಗತ್ಯ ನೆರವು ನೀಡಲಾಗುವುದು ಎಂದರು.

ಘಟಕದ ಮಾಜಿ ಅಧ್ಯಕ್ಷ ಜಗದೀಶ್ಚಂದ್ರ ಡಿ.ಕೆ ಮಾತನಾಡಿ, ಕೌಶಲ್ಯ ಪಡೆದ ಮಹಿಳೆಯರು ಸಮಾಜದಲ್ಲಿ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಯುವವಾಹಿನಿ ಕೇಂದ್ರ ಸಮಿತಿಯ ಕ್ರೀಡಾ ನಿರ್ದೇಶಕ ಶಂಕರ್ ಕೋಟ್ಯಾನ್ ತರಬೇತಿಯ ನಂತರ ಲಭ್ಯವಾಗುವ ಅವಕಾಶಗಳ ಕುರಿತು ಮಾಹಿತಿ ನೀಡಿದರು. ನಿಕಟ ಪೂರ್ವ ಅಧ್ಯಕ್ಷ ಮುರಳೀಧರ ಕೋಟ್ಯಾನ್ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಪ್ರಥಮ ಉಪಾಧ್ಯಕ್ಷ ಸಂಪತ್ ಪೂಜಾರಿ, ನಿರ್ದೇಶಕಿ ಶುಭಲಕ್ಷ್ಮೀ ಉಪಸ್ಥಿತರಿದ್ದರು. ತರಬೇತಿಯಲ್ಲಿ ಪಾಲ್ಗೊಂಡ ಮಹಿಳೆಯರು ತಮ್ಮ ಅನುಭವ ಹಂಚಿಕೊಂಡರು. ಒಟ್ಟು 34 ಮಹಿಳೆಯರು ತರಬೇತಿ ಪೂರ್ಣಗೊಳಿಸಿ ಪ್ರಮಾಣಪತ್ರ ಸ್ವೀಕರಿಸಿದರು. ಸಹಜ್ನ ಸ್ವಾಗತಿಸಿದರು. ಆಶಾಲತ ಕುಪ್ಪೆಪದವು ನಿರೂಪಿಸಿದರು. ಶಮ್ನಾಝ್ ವಂದಿಸಿದರು.