ಮೂಡುಬಿದಿರೆ: ಮೂಡುಮಾರ್ನಾಡು ಪಿ.ಎಂ.ಶ್ರೀ. ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳು, ಫಲಿತಾಂಶಕ್ಕೆ ಕಾರಣರಾದ ಶಿಕ್ಷಕರನ್ನು ಶಾಲೆಯ ಎಸ್‌ಡಿಎಂಸಿ ವತಿಯಿಂದ ಅಭಿನಂದಿಸಲಾಯಿತು.
ಕಳೆದ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಪ್ರೀತಿಕಾ, ಶಾನ್ವಿ, ಮಾನ್ಯ, ನಿಶಾತ್ ಫಾತಿಮಾ ಅವರನ್ನು ಸನ್ಮಾನಿಸಲಾಯಿತು. ಕಳೆದ ಮೂರು ವರ್ಷಗಳಿಂದ ಸತತವಾಗಿ ಶೇ.100 ಫಲಿತಾಂಶ ದಾಖಲಿಸಿ ತಾಲೂಕಿನ ಏಕೈಕ ಸರ್ಕಾರಿ ಪ್ರೌಢಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಶಾಲೆಯ ಶಿಕ್ಷಕರನ್ನೂ ಗೌರವಿಸಲಾಯಿತು.
ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ, ಎಸ್‌ಡಿಎಂಸಿ ಅಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್ ಪ್ರಸ್ತಾವನೆಗೈದು, ಶಾಲೆ ಸ್ಥಾಪನೆಯಾದ ದಿನದಿಂದಲೂ ಉತ್ತಮ ಸಾಧನೆ ಮಾಡುತ್ತಿರುವುದು ಅಭಿನಂದನೀಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್. ವಿರೂಪಾಕ್ಷಪ್ಪ ಮಾತನಾಡಿ, ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ಅತಿಹೆಚ್ಚು ಅಂಕ ಗಳಿಸಿದ ಈ ಶಾಲೆಯ ಒಟ್ಟು ಹತ್ತು ವಿದ್ಯಾರ್ಥಿಗಳು ಸರ್ಕಾರದಿಂದ ಕಂಪ್ಯೂಟರ್ ಬಹುಮಾನ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಅತಿಹೆಚ್ಚು ಫಲಿತಾಂಶ ದಾಖಲಿಸಿದ ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್. ವಿರೂಪಾಕ್ಷಪ್ಪ ಅವರನ್ನು ಶಾಲೆಯ ಪರವಾಗಿ ಸನ್ಮಾನಿಸಲಾಯಿತು. ನಿಕಟಪೂರ್ವ ಮುಖ್ಯ ಶಿಕ್ಷಕಿ, ಪ್ರಸ್ತುತ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ರಾಜಶ್ರೀ ಬಿ. ಶಿಕ್ಷಕರನ್ನು ಸನ್ಮಾನಿಸಿದರು.
ಪಡುಮಾರ್ನಾಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಾಯೀಶ್ ಚೌಟ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಯಶೋಧರ ಆಚಾರ್ಯ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶೋಭಾ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು, ಎಸ್‌ಡಿಎಂಸಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು. ಪ್ರಭಾರ ಮುಖ್ಯ ಶಿಕ್ಷಕಿ ಸುಜಾತ ಸ್ವಾಗತಿಸಿದರು. ಸಮಾಜ ಶಿಕ್ಷಕ ಜೋನ್ ರೊನಾಲ್ಡ್ ನಿರೂಪಿಸಿದರು. ಹಿಂದಿ ಭಾಷಾ ಶಿಕ್ಷಕಿ ಬಾಬಿ ವಂದಿಸಿದರು.