ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision - SIR) ಪ್ರಕ್ರಿಯೆ ಆರಂಭಗೊಂಡಿದ್ದು, ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಯುವಂತೆ ಹಾಗೂ ಅನರ್ಹ, ಮೃತ, ಸ್ಥಳಾಂತರಗೊಂಡ, ನಕಲಿ ಮತ್ತು ಡುಪ್ಲಿಕೇಟ್ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಉದ್ದೇಶದಿಂದ ಚುನಾವಣಾ ಆಯೋಗ ಮನೆಮನೆಗೆ ಪರಿಶೀಲನೆ ಆರಂಭಿಸಿದೆ. ಜೂನ್ 30ರಿಂದ ಜುಲೈ 29ರವರೆಗೆ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆಗಳಿಗೆ ಭೇಟಿ ನೀಡಿ ಎನ್ಯೂಮರೇಷನ್ (Enumeration) ನಮೂನೆಗಳನ್ನು ವಿತರಿಸಲಿದ್ದಾರೆ.
SIR ಎಂದರೇನು? SIR (Special Intensive Revision) ಎಂದರೆ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ. ಈಗಾಗಲೇ 2025ರ ಮತದಾರರ ಪಟ್ಟಿಯ ಮಾಹಿತಿಯನ್ನು ಹಿಂದಿನ ದಾಖಲೆಗಳೊಂದಿಗೆ ಹೋಲಿಕೆ ಮಾಡುವ ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈಗ ಮನೆಮನೆಗೆ ತೆರಳಿ ಮತದಾರರ ಮಾಹಿತಿಯನ್ನು ದೃಢೀಕರಿಸುವ ಕಾರ್ಯ ನಡೆಯುತ್ತಿದೆ.
BLO ಮನೆಗೆ ಬಂದಾಗ ಏನು ಮಾಡಬೇಕು? BLO ನೀಡುವ ನಮೂನೆಯಲ್ಲಿ ಮತದಾರರ ಹೆಸರು, EPIC ಸಂಖ್ಯೆ ಹಾಗೂ ವಿಳಾಸ ಮೊದಲೇ ಮುದ್ರಿತವಾಗಿರುತ್ತದೆ. ಮಾಹಿತಿಯನ್ನು ಪರಿಶೀಲಿಸಿ, ತಪ್ಪಿದ್ದರೆ ತಿದ್ದುಪಡಿ ಮಾಡಿಸಿ, ಇತ್ತೀಚಿನ ಭಾವಚಿತ್ರ ಅಂಟಿಸಿ, ಅಗತ್ಯ ವಿವರಗಳನ್ನು ಭರ್ತಿ ಮಾಡಿ ಸಹಿ ಹಾಕಿ BLO ಅವರಿಗೆ ಹಿಂತಿರುಗಿಸಬೇಕು. ಸಲ್ಲಿಸಿದ ನಮೂನೆಯ ಸ್ವೀಕೃತಿ ಪ್ರತಿಗೆ BLO ಅವರ ಸಹಿ ಪಡೆದು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಸೂಕ್ತ.
ದಾಖಲೆಗಳನ್ನು ಕೊಡಬೇಕೇ? ಸಾಮಾನ್ಯವಾಗಿ ಎನ್ಯೂಮರೇಷನ್ ನಮೂನೆ ಸಲ್ಲಿಸುವ ವೇಳೆ ಯಾವುದೇ ದಾಖಲೆ ನೀಡುವ ಅಗತ್ಯವಿಲ್ಲ. ಆದರೆ ನಂತರ ಚುನಾವಣಾ ನೋಂದಣಿ ಅಧಿಕಾರಿ (ERO) ಸೂಚಿಸಿದರೆ ಜನನ ಪ್ರಮಾಣಪತ್ರ, ಶಾಲಾ ದಾಖಲಾತಿ, ಪಾಸ್‌ಪೋರ್ಟ್, ಜಾತಿ ಪ್ರಮಾಣಪತ್ರ, ಸರ್ಕಾರಿ ಗುರುತಿನ ಚೀಟಿ, ಪಿಂಚಣಿ ಆದೇಶ, ಮನೆ ಅಥವಾ ಜಮೀನು ಹಂಚಿಕೆ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಆಧಾರ್ ಸಂಖ್ಯೆ ಕಡ್ಡಾಯವಲ್ಲ, ಆದರೆ ಮಾಹಿತಿ ಪರಿಶೀಲನೆಗೆ ಸಹಕಾರಿಯಾಗಬಹುದು.
ಮನೆಯಲ್ಲಿರದಿದ್ದರೆ ಏನು ಮಾಡಬೇಕು? ಮತದಾರರು ವಿದೇಶ, ಬೇರೆ ನಗರ ಅಥವಾ ಹೊರ ಊರಿನಲ್ಲಿ ಇದ್ದರೆ ಮನೆಯ ಹಿರಿಯ ಸದಸ್ಯರು ಅವರ ಪರವಾಗಿ ನಮೂನೆ ಭರ್ತಿ ಮಾಡಿ BLO ಅವರಿಗೆ ನೀಡಬಹುದು. ಆದರೆ ಒಬ್ಬ ವ್ಯಕ್ತಿಯ ಹೆಸರು ಮತದಾರರ ಪಟ್ಟಿಯಲ್ಲಿ ಒಂದೇ ಕ್ಷೇತ್ರದಲ್ಲಿ ಮಾತ್ರ ಇರಬೇಕು.
ಹೊಸ ಮತದಾರರು ಏನು ಮಾಡಬೇಕು? 18 ವರ್ಷ ಪೂರ್ಣಗೊಂಡವರು ಅಥವಾ ಮತದಾನಕ್ಕೆ ಅರ್ಹರಾಗುವವರು ಫಾರಂ-6 ಮೂಲಕ ಹೊಸದಾಗಿ ಹೆಸರು ಸೇರಿಸಿಕೊಳ್ಳಬಹುದು. BLO ಅವರಿಂದ ನಮೂನೆ ಪಡೆಯಬಹುದಾಗಿದ್ದು, ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ.
ಮುಖ್ಯ ದಿನಾಂಕಗಳು ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ಪ್ರತಿಯೊಬ್ಬ ಮತದಾರರೂ ತಮ್ಮ ಹೆಸರು ಪಟ್ಟಿಯಲ್ಲಿ ಇದೆಯೇ ಎಂದು ಪರಿಶೀಲಿಸಬೇಕು. ಹೆಸರು ಇಲ್ಲದಿದ್ದರೆ ಆಗಸ್ಟ್ 5ರಿಂದ ಅಕ್ಟೋಬರ್ 3ರವರೆಗೆ ಕ್ಲೈಮ್ಸ್ ಮತ್ತು ಆಬ್ಜೆಕ್ಷನ್ಸ್ ಅವಧಿಯಲ್ಲಿ ಫಾರಂ-6 ಸಲ್ಲಿಸಿ ಸೇರ್ಪಡೆಗೆ ಅರ್ಜಿ ಹಾಕಬಹುದು. ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.
ಮತದಾರರಿಗೆ ಪ್ರಮುಖ ಸಲಹೆ BLO ನಿಮ್ಮ ಮನೆಗೆ ಬಂದಾಗ ನಮೂನೆಯನ್ನು ನಿರ್ಲಕ್ಷ್ಯ ಮಾಡದೆ ಪಡೆದು ಸರಿಯಾಗಿ ಭರ್ತಿ ಮಾಡಿ ಸಲ್ಲಿಸಿ. ಕರಡು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಕಡ್ಡಾಯವಾಗಿ ಪರಿಶೀಲಿಸಿ. ಸಮಯಕ್ಕೆ ಕ್ರಮ ಕೈಗೊಂಡರೆ ಮಾತ್ರ ಅಂತಿಮ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಉಳಿಯುವ ಸಾಧ್ಯತೆ ಹೆಚ್ಚಿರುತ್ತದೆ.
ವಿಶೇಷ ಲೇಖನ : ರಾಜೇಶ್ ಕಡಲಕೆರೆ, ಕಾಂಗ್ರೆಸ್ ಮುಖಂಡ