ಮೂಡುಬಿದಿರೆ: ತಮಿಳುನಾಡಿನಲ್ಲಿ ಜೂನ್ 26ರಿಂದ 28ರವರೆಗೆ ನಡೆದ ರಾಷ್ಟ್ರೀಯ ಮಟ್ಟದ ಸೌತ್ ಝೋನ್ ಫ್ಲೋರ್ ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಮೂಡುಬಿದಿರೆ ಭಾಗದ ಕ್ರೀಡಾಪಟುಗಳು ಗಮನಾರ್ಹ ಸಾಧನೆ ದಾಖಲಿಸಿದ್ದಾರೆ.
ವಿಕ್ರೀತಾ ಓಪನ್ ವಿಭಾಗದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗೆದ್ದಿದ್ದಾರೆ. ಅಂಡರ್–19 ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಒಂದು ಚಿನ್ನದ ಹಾಗೂ ಒಂದು ಬೆಳ್ಳಿ ಪದಕ ಗೆದ್ದು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಅದೇ ಚಾಂಪಿಯನ್‌ಶಿಪ್‌ನಲ್ಲಿ ಮೂಡುಬಿದಿರೆಯ ಧವಳಾ ಕಾಲೇಜಿನ ವಿದ್ಯಾರ್ಥಿನಿಯರಾದ ವಿಶ್ಮಿತಾ ಶೆಟ್ಟಿ ಮತ್ತು ಅನ್ವಿತಾ ಅಂಡರ್–19 ವಿಭಾಗದಲ್ಲಿ ಕರ್ನಾಟಕ ತಂಡದ ಪರ ಆಡಿದ್ದು, ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಗಳಿಸಿದ್ದಾರೆ.
ವಿಶ್ಮಿತಾ ಶೆಟ್ಟಿ ಮಾರ್ನಾಡಿನವರಾಗಿದ್ದು, ಅನ್ವಿತಾ ಮೂಡುಬಿದಿರೆಯವರಾಗಿದ್ದಾರೆ. ವಿದ್ಯಾರ್ಥಿನಿಯರ ಸಾಧನೆಗೆ ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.